ಬೆಂಗಳೂರು:ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿರುವುದರಿಂದ ರಾಜ್ಯ ನ್ಯಾಯಾಂಗ ವಲಯದಲ್ಲಿ ದಾಖಲೆ ನಿರ್ಮಾಣವಾಗಿದೆ. ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಎ.ಹಕೀಮ್ ಅವರ ಬಳಿಕ, ಅಂದರೆ ಸರಿಸುಮಾರು 27 ವರ್ಷಗಳ ನಂತರ ರಾಜ್ಯದಲ್ಲೇ ಕಾನೂನು ಪದವಿ ಪಡೆದು, ವಕೀಲರಾಗಿ ಸೇವೆ ಸಲ್ಲಿಸಿದ ನಂತರ ಇದೀಗ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನ್ಯಾ.ಪಿ.ಎಸ್.ದಿನೇಶ್ ನೇಮಕಗೊಂಡಿದ್ದಾರೆ.
ನ್ಯಾ.ಎಸ್.ಎ.ಹಕೀಮ್ 1996ರ ಮೇ 3ರಿಂದ 9ರವರೆಗೆ ಕೇವಲ ಆರು ದಿನಗಳ ಕಾಲ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಇವರ ನಂತರ ಕನ್ನಡಿಗರೊಬ್ಬರು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾದ ಉದಾಹರಣೆ ಇಲ್ಲ. ಕೇವಲ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದು, ನಿವೃತ್ತರಾದ ಹಾಗೂ ಬೇರೊಂದು ರಾಜ್ಯದ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾದ ನಿದರ್ಶನವಿದೆ. ಆದರೀಗ 27 ವರ್ಷಗಳ ನಂತರ ಕನ್ನಡಿಗರಾದ ಪಿ.ಎಸ್.ದಿನೇಶ್ ಕುಮಾರ್ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದಾರೆ.
1996ರ ಮೇ 10ರ(ಎಸ್.ಎ.ಹಕೀಮ್ ಅವರ) ನಂತರ ಈವರೆಗೂ ಒಟ್ಟು 15 ಮಂದಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಅವರಲ್ಲಿ ಯಾರೊಬ್ಬರೂ ಕರ್ನಾಟಕದವರಾಗಿರಲಿಲ್ಲ. ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ (ಹಾಲಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ) ಪ್ರಸನ್ನ ಬಿ.ವರಾಳೆ ಮೂಲತಃ ಬೆಳಗಾವಿಯ ನಿಪ್ಪಾಣಿಯರಾದವರೂ ಮುಂಬೈನಲ್ಲಿ ಕಾನೂನು ಪದವಿ ಪಡೆದವರು. ಅಲ್ಲಿನ ಕೋರ್ಟ್ ನ್ಯಾಯಮೂರ್ತಿಯಾಗಿ 2022ರ ಅ.15ರಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಸುಮಾರು 16 ತಿಂಗಳ ಕಾಲ ಕರ್ನಾಟಕ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿ, 2024ರ ಜ.24ರಂದು ಸುಪ್ರಿಂ ಕೋರ್ಟ್‌ಗೆ ಪದೋನ್ನತಿ ಪಡೆದರು. ಅವರಿಂದ ತೆರವಾದ ಸ್ಥಾನಕ್ಕೆ ಪಿ.ಎಸ್.ದಿನೇಶ್ ಕುಮಾರ್ ನೇಮಕಗೊಂಡಿದ್ದಾರೆ.
1985ರ ನಂತರ..:1984ರ ಮುನ್ನ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳನ್ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಸಂಪ್ರದಾಯವಿದ್ದು, ನಂತರ ಅದಕ್ಕೆ ಬ್ರೇಕ್ ಬಿದ್ದಿತ್ತು. 1984ರ ಫೆ.6ರಿಂದ 1985ರ ಸೆ.16ರವರೆಗೆ ಕನ್ನಡಿಗರೇ ಆದ ವಿ.ಎಸ್.ಮಳೀಮಠ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ನಂತರ ಕೇರಳ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದರು. ತದನಂತರ ನ್ಯಾ.ಎಸ್.ಎ.ಹಕೀಮ್ 1996ರ ಮೇ 3ರಿಂದ 1996ರ ಕೊನೆಯವರೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಳಿಕ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಸಂಪ್ರದಾಯ ಹೊರಟು ಹೋಗಿತ್ತು.