ಜಗದೀಶ್ ಶೆಟ್ಟರ್ (ETV Bharat) ಹುಬ್ಬಳ್ಳಿ:ಬಿಜೆಪಿ ಆಪರೇಷನ್ ಕಮಲ ಮಾಡುವ ಅವಶ್ಯಕತೆಯಿಲ್ಲ. ಕಾಂಗ್ರೆಸ್ನವರ ಕಚ್ಚಾಟದಿಂದಲ್ಲೇ ಸರ್ಕಾರ ಬಿದ್ದು ಹೋಗಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದರು.
ನಗರದಲ್ಲಿಂದು ಮಾತನಾಡಿದ ಅವರು, ಸಿಎಂ, ಡಿಸಿಎಂ ನಡುವೆ ಸಮನ್ವಯದ ಕೊರತೆಯಿದೆ. ನಮ್ಮವರು ಯಾರೂ ಹೋಗಲ್ಲ ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಸರ್ಕಾರ ಗಟ್ಟಿ ಮುಟ್ಟಾಗಿದೆ ಎಂದರೆ ಏನು ಅರ್ಥ. ಈ ಹಿಂದೆ 17 ಜನ ಹೋದಾಗ ಸಿದ್ದರಾಮಯ್ಯ ಅವರು ಏನ್ ಹೇಳಿದ್ರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಒಳಬೇಗುದಿ ಜಾಸ್ತಿಯಿದೆ. ಇದು ಸರ್ಕಾರದ ಪತನಕ್ಕೂ ಕಾರಣವಾಗಬಹುದು. ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆಯವರು ಹೇಳಿದ್ದಾರೆ. ನಾನು ಕೂಡಾ ಮೂರು ತಿಂಗಳ ಹಿಂದೆ ಹೇಳಿದ್ದೇನೆ ಎಂದರು.
ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, "ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಆಡಳಿತ ವೈಫಲ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುತ್ತಿಲ್ಲ. ನೇಹಾ ಕೊಲೆಯಾದ ಬಳಿಕ ಪೊಲೀಸರು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಈ ಪ್ರಕರಣವನ್ನು ಸುಲಭವಾಗಿ ತೆಗೆದುಕೊಂಡಿದ್ದಾರೆ. ಆರೋಪಿ ಮನೆ ಹೊಕ್ಕು ಅಂಜಲಿ ಹತ್ಯೆ ಮಾಡಿದ್ದು, ಜನ ಭಯ ಭೀತರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಇದಕ್ಕೆ ಸಿಎಂ ಹಾಗೂ ಡಿಸಿಎಂ ಜವಾಬ್ದಾರಿ ಎಂದು ಆರೋಪಿಸಿದರು.
ಬಳಿಕ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶೆಟ್ಟರ್, 'ರೇವಣ್ಣ ಪ್ರಕರಣದಲ್ಲಿ ನಮ್ಮ ಸ್ಟ್ಯಾಂಡ್ ಕ್ಲಿಯರ್ ಇದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಹೀಗಾಗಿ ನಾವು ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಿ ಅಂತಿದ್ದೇವೆ. ಆದರೆ ಇದರಲ್ಲಿ ರಾಜಕಾರಣ ಮಾಡಬಾರದು. ಮೈತ್ರಿಗೂ ಪ್ರಜ್ವಲ್ ರೇವಣ್ಣಗೂ ಸಂಬಂಧವಿಲ್ಲವೆಂದರು.
ಈ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ನಾನು ಗೆದ್ದು ಬರ್ತಿನಿ. ಈಗ ಒಂದು ವಾರ ಕಾಲ ನಾನು ದೆಹಲಿ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಇನ್ನು ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ನೀಡಬೇಕಿತ್ತು. ನಾನು ಅವರ ಜೊತೆಗೆ ಮಾತನಾಡುತ್ತೇನೆ. ಅವರಿಗೆ ಅನ್ಯಾಯ ಆಗಿರೋದು ನಿಜ, ನಾನು ಒಪ್ಪಿಕೊಳ್ಳುತ್ತೇನೆ ಎಂದು ಶೆಟ್ಟರ್ ತಿಳಿಸಿದರು.
ಇದನ್ನೂ ಓದಿ:ಸಾಮಾಜಿಕ ಜಾಲತಾಣ X ಬ್ಲೂ ಟಿಕ್ ಮಾರ್ಕ್ ಕಳೆದುಕೊಂಡ ಪ್ರಜ್ವಲ್ ರೇವಣ್ಣ - Prajwal Revanna X Account