ಧಾರವಾಡ:ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಅಪಾರ್ಟ್ಮೆಂಟ್ವೊಂದರಲ್ಲಿ ಪತ್ತೆಯಾದ ಅಪಾರ ಪ್ರಮಾಣದ ನಗದು ಹಣದ ಮೊತ್ತ ದೃಢಪಟ್ಟಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಎಣಿಕೆ ಮಾಡಿದಾಗ 17,98,03,100 ರೂ.ಗಳು ಪತ್ತೆ ಆಗಿದ್ದು, ವಶಕ್ಕೆ ಪಡೆದಿದ್ದಾರೆ.
ಮದ್ಯ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇರೆಗೆ ಅಬಕಾರಿ ದಳ ನಗರದ ನಾರಾಯಣಪುರ ಮುಖ್ಯ ರಸ್ತೆಯ ಅರ್ನಾ ಅಪಾರ್ಟ್ಮೆಂಟ್ನಲ್ಲಿ ಮಂಗಳವಾರ ರಾತ್ರಿ ತಪಾಸಣೆ ಕೈಗೊಂಡಿತ್ತು. ಆಗ ಮದ್ಯದ ಬದಲಿಗೆ ತಿಜೋರಿಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆ ಆಗಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳು ತಕ್ಷಣ ಈ ಬಗ್ಗೆ ಎಫ್.ಎಸ್.ಟಿ (ಪ್ಲೈಯಿಂಗ್ ಸ್ಕ್ವಾಡ್) ತಂಡಕ್ಕೆ ತಿಳಿಸಿದ್ದರು.
ಬಳಿಕ ಸ್ಥಳದಲ್ಲಿ ಪತ್ತೆಯಾದ ನಗದು ಹಣ 10 ಲಕ್ಷ ರೂ.ಗಳಿಗಿಂತ ಅಧಿಕ ಇರುವುರಿಂದ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಲಾಗಿತ್ತು. ಐಟಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಎಣಿಕೆ ಮಾಡಿದ್ದು, 17,98,03,100 ರೂ. ಇರುವುದು ದೃಢಪಟ್ಟಿದೆ. ಹಣ ಎಣಿಕೆ ಮಾಡಿ, 18 ಬ್ಯಾಗ್ಗಳಲ್ಲಿ ತುಂಬಿಕೊಂಡ ಅಧಿಕಾರಿಗಳು ಬ್ಯಾಂಕ್ಗೆ ರವಾನೆ ಮಾಡಿದ್ದಾರೆ. ಹುಬ್ಬಳ್ಳಿ ಕೇಶ್ವಾಪುರದ ಎಸ್‌ಬಿಐ ಶಾಖೆಗೆ ವರ್ಗಾಯಿಸಲಾಗಿದೆ.