ಶ್ರೀರಾಮನ ಶರದಿಂದ ಹುಟ್ಟಿದ ಶರಾವತಿ ನದಿ ಶಿವಮೊಗ್ಗ:ಶರಾವತಿನದಿಯೂ ಕರ್ನಾಟಕದ ಪ್ರಮುಖ ನದಿಗಳಲ್ಲೊಂದಾಗಿದೆ. ಈ ನದಿಯ ಉಗಮವು ರಾಮಾಯಣ ಕಾಲದಲ್ಲಿ ಆಗಿದೆ ಎಂದು ಹೇಳಲಾಗುತ್ತದೆ.
ಶ್ರೀರಾಮ ತನ್ನ ತಂದೆ ದಶರಥನ ಆದೇಶದಂತೆ 14 ವರ್ಷಗಳ ಕಾಲ ವನವಾಸಕ್ಕೆ ತೆರಳಿದಾಗ ಉತ್ತರ ಭಾರತದಿಂದ ದಕ್ಷಿಣ ಭಾಗಕ್ಕೆ ಬಂದಾಗ ಸೀತಾ ಮಾತೆಗೆ ಬಾಯಾರಿಕೆಯಾಗಿತ್ತು. ಈ ವೇಳೆ ಶ್ರೀರಾಮ ತನ್ನ ಶರವನ್ನು(ಬಾಣ) ಭೂಮಿಗೆ ಬಿಟ್ಟು ನೀರನ್ನು ಮೇಲಕ್ಕೆ ಬರುವಂತೆ ಮಾಡುತ್ತಾನೆ. ಆಗ ನೀರು ಭೂಮಿಯಿಂದ ಚಿಮ್ಮುತ್ತದೆ. ಈ ನೀರನ್ನು ಸೀತಾ ಮಾತೆ ಕುಡಿದು ತನ್ನ ಬಾಯಾರಿಕೆಯನ್ನು ಈಡೇರಿಸಿಕೊಂಡರು. ನಂತರ ತನ್ನ ವನವಾಸವನ್ನು ಮುಂದುವರೆಸಿದರು ಎಂಬ ಪ್ರತೀತಿ ಇದೆ. ಶರದಿಂದ ಹುಟ್ಟಿದ್ದಕ್ಕೆ ಶರಾವತಿ ಎಂದು ಹೆಸರು ಬಂತು ಎನ್ನಲಾಗುತ್ತದೆ. ಇದರಿಂದಲೇ ಶರಾವತಿ ನದಿಯು ವೇಗವಾಗಿ ಹರಿಯುತ್ತದೆ ಎಂಬ ನಂಬಿಕೆ ಈ ಭಾಗದಲ್ಲಿದೆ.
ಶರಾವತಿ ಹುಟ್ಟುವ ಸ್ಥಳ ಇರುವುದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ. ಅಂಬುತೀರ್ಥ ಎಂದರೇ ಅಂಬು (ಬಾಣ)ವಿನಿಂದ ಬಂದ ತೀರ್ಥ ಎಂದರ್ಥ. ಅಂಬುತೀರ್ಥದಿಂದ ಹುಟ್ಟಿದ ಶರಾವತಿ ನದಿಯು ಮುಂದೆ ಜೋಗ ಜಲಪಾತವಾಗಿ ಅರಬ್ಬಿ ಸಮುದ್ರಕ್ಕೆ ಸೇರುತ್ತದೆ. ಶರಾವತಿ ನದಿಯು ಸುಮಾರು 128 ಕಿಲೋ ಮೀಟರ್ ದೂರ ಹರಿಯುತ್ತದೆ. ಇದರಿಂದ ಅಂಬುತೀರ್ಥ ಸ್ಥಳಕ್ಕೆ ಪವಿತ್ರ ಸ್ಥಾನವನ್ನು ಮಲೆನಾಡಿಗರು ನೀಡಿದ್ದಾರೆ.
ಯಾತ್ರ ಸ್ಥಳವಾಗಿರುವ ಅಂಬುತೀರ್ಥ:ಅಂಬುವಿನಿಂದ ಬಂದ ತೀರ್ಥವಾದ ಶರಾವತಿ ನದಿಯನ್ನು ಈ ಭಾಗದ ಜನ ಪವಿತ್ರ ಎಂದು ಭಾವಿಸಿದ್ದಾರೆ. ಈ ಭಾಗದಲ್ಲಿ ಚರ್ಮ ರೋಗ, ಸೇರಿದಂತೆ ಇನ್ನೂ ಅನೇಕ ರೋಗಗಳಿಗೆ ನದಿಯ ನೀರನ್ನು ರಾಮಬಾಣವಾಗಿ ಬಳಸುತ್ತಾರೆ. ಈ ಸ್ಥಳದಲ್ಲಿ ರಾಮೇಶ್ವರನ ದೇವಾಲಯವಿದೆ. ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಾಗೂ ರಾಮನವಮಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ರಾಮೇಶ್ವರ ಗರ್ಭ ಗುಡಿಯ ಮುಂಭಾಗದಲ್ಲಿ ಸಣ್ಣ ಜಾಗದಲ್ಲಿ ನೀರು ಸಣ್ಣದಾಗಿ ಹರಿದು ಬರುತ್ತದೆ. ಇದೇ ಮುಂದೆ ದೊಡ್ಡದಾಗಿ ನದಿಯಾಗಿ ಹರಿಯುತ್ತದೆ.
ಅಂಬುತೀರ್ಥ ಸ್ಥಳದ ಮಹತ್ವವನ್ನು ಕುರಿತು ಅರ್ಚಕರಾದ ವೆಂಕಟರಾಮ ಶಾಸ್ತ್ರಿ ತಿಳಿಸಿದ್ದಾರೆ. ''ಶ್ರೀರಾಮ ತನ್ನ ಬಿಲ್ಲಿನಿಂದ ಬಾಣ ಬಿಟ್ಟ ಜಾಗವನ್ನು ಬಿಲ್ವೆಶ್ವೇರ ಎಂದು ಕರೆಯುತ್ತಾರೆ. ಈ ಜಾಗದಿಂದ ನೀರು ಹರಿದು ಅಂಬುತೀರ್ಥದ ರಾಮೇಶ್ವನ ಮುಂದೆ ಹರಿದು ಬರುತ್ತದೆ. ರಾಮಾಯಾಣದಲ್ಲಿ ಶ್ರೀರಾಮ ಸೀತೆ ಹಾಗೂ ಲಕ್ಷ್ಮಣನ ಜೊತೆ ವನವಾಸಕ್ಕೆ ಹೋಗುವಾಗ ನಡೆದು ಹೋಗುವಾಗ ಸೀತಾ ಮಾತೆಗೆ ಬಾಯಾರಿಕೆಯಾಗುತ್ತದೆ. ಉತ್ತರ ಭಾರತದಲ್ಲಿ ಚಳಿಯ ವಾತಾವರಣ ಇರುತ್ತದೆ. ಅದೇ ದಕ್ಷಿಣ ಭಾರತದಲ್ಲಿ ಸ್ವಲ್ಪ ಬಿಸಿಲಿನ ವಾತಾವರಣ ಇರುತ್ತದೆ. ಇದರಿಂದ ಸೀತಾ ಮಾತೆಗೆ ಬಾಯಾರಿಕೆಯಾದಾಗ ಶ್ರೀರಾಮ ತನ್ನ ಬಾಣವನ್ನು ಭೂಮಿಗೆ ಬಿಟ್ಟು ನೀರನ್ನು ಮೇಲಕ್ಕೆ ಬರುವಂತೆ ಮಾಡುತ್ತಾರೆ. ಇದರಿಂದ ಶರಾವತಿ ನದಿಯ ಉಗಮವಾಗುತ್ತದೆ'' ಎಂದರು.
ಈ ಕ್ಷೇತ್ರದ ಬಗ್ಗೆ ಭಕ್ತರಾದ ಸೀಮಾ ನಾಯಕ್ ಎಂಬುವರು ಮಾತನಾಡಿ, ಅಂಬುತೀರ್ಥ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿನ ರಾಮೇಶ್ವರನ ಸನ್ನಿದಿಗೆ ಬಂದು ನಾವು ಏನೇ ಹರಕೆ ಹೂತ್ತರೂ ಸಹ ಅದು ಈಡೇರುತ್ತದೆ. ಇಲ್ಲಿನ ನೀರು ಚರ್ಮ ರೋಗ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅಯೋಧ್ಯೆಯಲ್ಲಿ 6ನೇ ದಿನದ ಧಾರ್ಮಿಕ ಆಚರಣೆ: ಇಂದಿನ ಕಾರ್ಯಕ್ರಮಗಳ ವಿವರ