ಚಿಕ್ಕೋಡಿ:''ಚಿಕ್ಕೋಡಿ ಸಂಸದ ಹಾಗೂ ಪ್ರಸ್ತುತ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ಅಣ್ಣಸಾಹೇಬ ಜೊಲ್ಲೆ ಯಾವುದೇ ಗ್ರಾಮಗಳಿಗೂ ಭೇಟಿ ಕೊಟ್ಟಿಲ್ಲ. ಏನೂ ಅಭಿವೃದ್ಧಿ ಮಾಡಲಿಲ್ಲ. ನಿಮ್ಮ ಗ್ರಾಮಗಳಲ್ಲಿ ಸಂಸದರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಯಾರೇ ಗ್ರಾಮಸ್ಥರು ಹೇಳಿದರೆ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ'' ಎಂದು ಕಾಗವಾಡ ಹಿರಿಯ ಶಾಸಕ ರಾಜು ಕಾಗೆ ಸವಾಲು ಹಾಕಿದ್ದಾರೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರವಾಗಿ ಶನಿವಾರ ಪ್ರಚಾರ ಸಂದರ್ಭದಲ್ಲಿ ಕೈ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿರು.
ಐದು ವರ್ಷಗಳಲ್ಲಿ ಅಣ್ಣಾಸಾಹೇಬ ಜೊಲ್ಲೆ ಯಾರ ಮನೆ ಅಥವಾ ಯಾವ ಗ್ರಾಮಗಳಿಗೆ ಬಂದಿದ್ದಾರೆ? ಅವರು ಇಲ್ಲಿಗೆ ಬಂದು ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅಂತ ನೀವು ಹೇಳಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಒಬ್ಬರಾದರೂ ಬಂದು ಜೊಲ್ಲೆ ಅಧಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರೆ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿಮ್ಮಮನೆ ಆಳಾಗಿ ದುಡಿಯುತ್ತೇನೆ. ಕಳೆದ ಬಾರಿ ಅಣ್ಣಾಸಾಹೇಬ ಜೊಲ್ಲೆ ಆರಿಸಿ ಬರೋಕೆ ನಾನು ಲಕ್ಷ್ಮಣ ಅವದಿ ಕಾರಣ. ಆದರೆ, ಅವನು ನಮಗೆ ಮಾಡಿದ ಅನ್ಯಾಯ ಏನೆಂದು ಸಮಯ ಬಂದಾಗ ಹೇಳ್ತೀನಿ'' ಎಂದು ಏಕವಚನದಲ್ಲಿಯೇ ಹರಿಹಾಯ್ದರು.
''ಸಮಯ ಬಂದಾಗ ಅಣ್ಣಾಸಾಹೇಬ್ ಜೊಲ್ಲೆ ಕುಂಡಲಿ ಬಿಚ್ಚಿಡ್ತೀನಿ. ಯಲ್ಲಮ್ಮನ ದೇವಸ್ಥಾನ ಜೀರ್ಣೋದ್ಧಾರಕ್ಕೆ 31 ಲಕ್ಷ ಅನುದಾನ ಕೇಳಿದ್ದೆ. ಐದು ವರ್ಷದೊಳಗೆ ಕೊಡ್ತೀನಿ ಅಂತ ಹೇಳಿ ಅನುದಾನವನ್ನು ಕೊಡಲೇ ಇಲ್ಲ. ಕಳೆದ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ್ ಜೊಲ್ಲೆ ವಿರುದ್ಧ ಕೆಲಸ ಮಾಡಿದ ನಂತರ, 2019ರಲ್ಲಿ ಶ್ರೀಮಂತ ಪಾಟೀಲ್ ಬಿಜೆಪಿಗೆ ಬಂದ ನಾನು ಕಾಂಗ್ರೆಸ್ಗೆ ಹೋದೆ. ರಾಜು ಕಾಗೆ ಚೀಟಿ (ಲೆಟರ್) ನಡೆಯೋದಿಲ್ಲ, ಶ್ರೀಮಂತ ಪಾಟೀಲ್ ಚೀಟಿ (ಲೆಟರ್) ತಗೊಂಡು ಬನ್ನಿ ಅನ್ನೋಕೆ ಶುರು ಮಾಡಿದ ಆರಿಸಿ ತಂದ ನನ್ನ ಲೆಟರ್ ಬೇಡ ಅಂದಿದ್ದರು'' ಎಂದು ಗರಂ ಆದ ಶಾಸಕ ಕಾಗೆ, ''ಅಣ್ಣಾಸಾಹೇಬ್ ಜೊಲ್ಲೆ ಯಾವುದೇ ಗ್ರಾಮಗಳಿಗೂ ಬಂದಿಲ್ಲ, ಕೆಲಸನೂ ಮಾಡಿಲ್ಲ. ಹೀಗಾಗಿ ನೀವು ನಮ್ಮ ಅಭ್ಯರ್ಥಿ ಗೆಲ್ಲಿಸಬೇಕು. ನೀವು ನಮ್ಮ ಅಭ್ಯರ್ಥಿ ಗೆಲ್ಲಿಸಿದ್ರೆ, ನಾನು ನಿಮ್ಮ ಮನೆಗೆ ಬಂದು ಕೆಲಸ ಮಾಡ್ತೀನಿ'' ಎಂದು ಭರವಸೆ ನಿಡಿದರು.
ಇದನ್ನೂ ಓದಿ:ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆ - Dheeraj Prasad Joins Congress