ಹಾವೇರಿ/ಬೆಳಗಾವಿ:ಬೆಳಗಾವಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರ ಬರೆದಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲೆಯ ಬಂಕಾಪುರ ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಸಂದಿದೆ. ಈ ಹಿನ್ನೆಲೆ ಬೆಳಗಾವಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಒಬಾಮಗೆ ಪತ್ರ ಬರೆದು ಆಹ್ವಾನಿಸಿದ್ದೇನೆ ಎಂದು ಹೇಳಿದರು.
ಈ ಕುರಿತು ಇಂದು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಹೆಚ್ ಕೆ ಪಾಟೀಲ್, ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಬರಾಕ್ ಒಬಾಮಾ ಅವರನ್ನು ಆಹ್ವಾನಿಸಿ ಪತ್ರ ಬರೆದಿದ್ದಾರೆ. ಡಿಸೆಂಬರ್ 26-27 ಅಥವಾ ಜನವರಿ-2025 ರಿಂದ ಅಕ್ಟೋಬರ್-2025ರೊಳಗಾಗಿ ದಿನಾಂಕ ನೀಡಲು ಕೋರಲಾಗಿದೆ. ಜಂಟಿ ಅಧಿವೇಶನವನ್ನು ಬೆಳಗಾವಿಯಲ್ಲಿಯೇ ನಡೆಸಲಾಗುವುದು ಎಂದು ತಿಳಿಸಿದರು.
ಅಧಿವೇಶನಕ್ಕೆ ಸಾಕ್ಷಿಯಾದ ಸ್ಥಳಗಳಿಗೆ ಭೇಟಿ ನೀಡಿ, ವಿಸ್ತೃತವಾಗಿ ಚರ್ಚಿಸಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು. ಅಕ್ಟೋಬರ್ 2 ರಿಂದ ಒಂದು ವರ್ಷ ಕಾಲ ಶತಮಾನೋತ್ಸವ ವರ್ಷಾಚರಣೆ ನಡೆಯಲಿದೆ. ಅಂತಾರಾಷ್ಟ್ರೀಯ ಮಹತ್ವ ಪಡೆಯಲು ವಿಧಾನಮಂಡಲ ಜಂಟಿ ಅಧಿವೇಶನ ನಡೆಸಲು ಹಾಗೂ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಕರೆಸಲು ಉದ್ದೇಶಿಸಲಾಗಿದೆ. ಗಾಂಧೀಜಿಯ ಕುರಿತು ವಿಶೇಷ ಅಭಿಮಾನ ಹೊಂದಿರುವ ಒಬಾಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದರು.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಮೂಲಕ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಇನ್ನಷ್ಟು ಪ್ರಚುರಪಡಿಸಲು ಹಾಗೂ ಮನೆ ಮನೆಗೆ ಗಾಂಧೀಜಿ ಸಿದ್ಧಾಂತಗಳನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ. ಅರ್ಥಪೂರ್ಣ, ರಚನಾತ್ಮಕ ಕಾರ್ಯಕ್ರಮ ಆಯೋಜಿಸಲು ಗಾಂಧಿವಾದಿಗಳು, ಹಿರಿಯರ ಜತೆ ಚರ್ಚಿಸಿ ಅಧಿವೇಶನದ ಇತಿಹಾಸ ಮರುಸೃಷ್ಟಿ ಮತ್ತು ಮೆಲುಕು ಹಾಕಲು ಶತಮಾನೋತ್ಸವ ಆಚರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಶತಮಾನದ ಸಂಭ್ರಮ:ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಒಂದೇ ಬಾರಿ. ಅದು ನಡೆದಿದ್ದು ಗಡಿನಾಡು ಬೆಳಗಾವಿಯಲ್ಲಿ. ಡಿಸೆಂಬರ್ 26, 27, 1924ರಂದು ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ಐತಿಹಾಸಿಕ 39ನೇ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂಬುದು ಮತ್ತೊಂದು ವಿಶೇಷ. ಆ ಬಳಿಕ ಮತ್ತೆ ಗಾಂಧೀಜಿ ಯಾವುದೇ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸದೇ ಇರುವುದು ಗಮನಾರ್ಹ ಸಂಗತಿ. ಈ ಅಧಿವೇಶನಕ್ಕೀಗ ಶತಮಾನದ ಸಂಭ್ರಮ. ಈ ಹಿನ್ನೆಲೆ ಬೆಳಗಾವಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರವು ಬರಾಕ್ ಒಬಾಮಗೆ ಪತ್ರ ಬರೆದು ಆಹ್ವಾನ ನೀಡಿದೆ.