ಬೆಂಗಳೂರು: ಇವತ್ತಿನವರೆಗೂ ಚುನಾವಣೆಗೆ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಆದರೆ, ಆಕಾಂಕ್ಷಿ ಆಗಿ ಸುತ್ತಾಡಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ನನ್ನದೇ ಆದ ನೆಟ್ವರ್ಕ್ ಇದೆ. ನನಗೂ ತುಮಕೂರಿಗೆ ಅವಿನಾಬಾವ ಸಂಬಂಧ ಇದೆ. ಅಲ್ಲಿರುವವರಿಗೂ ನನ್ನಷ್ಟು ಮಾಹಿತಿ ಇಲ್ಲ. ಕ್ಷೇತ್ರದ ಸುತ್ತಲು ಬೇರೆ ರಾಜಕಾರಣಿ ಆರು ತಿಂಗಳು ತಗೊಂಡರೆ ನಾನು ಒಂದು ತಿಂಗಳಲ್ಲೇ ಸುತ್ತಬಲ್ಲೆ. 24x7 ಕೆಲಸ ಮಾಡುತ್ತೇನೆ, ನಾನು ಸ್ವಚ್ಚ ನೀರಿದ್ದಂತೆ, ಎಲ್ಲದಕ್ಕೂ ಬಳಕೆ ಮಾಡಬಹುದು ಎಂದು ತುಮಕೂರು ಟಿಕೆಟ್ ಪಕ್ಕಾ ಎಂದು ಪರೋಕ್ಷವಾಗಿ ಮಾಜಿ ಸಚಿವ ವಿ ಸೋಮಣ್ಣ ಸುಳಿವು ನೀಡಿದ್ದಾರೆ.
ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರಿನಿಂದ ಟಿಕೆಟ್ ಖಚಿತ ವಿಚಾರ ಕುರಿತು ನನಗೂ ಮಾಹಿತಿ ಇದೆ. ಯಡಿಯೂರಪ್ಪ, ವಿಜಯೇಂದ್ರ ಬಂದಮೇಲೆ ಮಾತನಾಡುತ್ತೇನೆ. ಇವತ್ತಿನವರೆಗೂ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಸುಳ್ಳು ಹೇಳಲು ನನಗೆ ಬರಲ್ಲ. ಆಕಾಂಕ್ಷಿ ಆಗಿ ಸುತ್ತಾಡಿದ್ದೇನೆ. ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿಗೆ ಕಾಲಿಟ್ಟಿಲ್ಲ. ತುಮಕೂರಿನಲ್ಲಿ ನನ್ನದೇ ಆದ ನೆಟ್ವರ್ಕ್ ಇದೆ.
ನನಗೂ ತುಮಕೂರಿಗೆ ಅವಿನಾಬಾವ ಸಂಬಂಧ ಇದೆ. ಅಷ್ಟು ಒಳಹೊಕ್ಕು ಕೆಲಸ ಮಾಡಿದ್ದೇನೆ. ಅಲ್ಲಿನ ಎಲ್ಲ ಜಾತಿವಾರು ಮಾಹಿತಿ ನನಗಿದೆ, ನಾಯಕ, ಕಾಡುಗೊಲ್ಲರು ಎಷ್ಟಿದ್ದಾರೆ, ಬಡವರು ಎಷ್ಟಿದ್ದಾರೆ ಅವರನ್ನು ಮುಖ್ಯ ವಾಹಿನಿಗೆ ತರೋದು ಹೇಗೆ ಅಂತಾ ಶ್ರಮ ಪಟ್ಟಿದ್ದೆ. ರಾಜಕಾರಣಿಯಾಗಿ ಅಧಿಕಾರ ಬಂದಾಗ ಕೆಲವರಿಗೆ ಮಾತ್ರ ಸೀಮಿತವಾಗಬಾರದು ಎಲ್ಲರಿಗೂ ಅಧಿಕಾರ ತಲುಪಿಸಿದವನೇ ಯಶಸ್ವಿ ನಾಯಕನಾಗಲು ಸಾಧ್ಯ.