ದಾವಣಗೆರೆ:ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಹಾಡಹಗಲೇ ಸಂಬಂಧಿಕರ ಮನೆಯಲ್ಲಿದ್ದ ಪತ್ನಿಯನ್ನು ಪತಿಯೇ ಅಪಹರಿಸಿರುವ ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತ್ನಿ ಅನುಂಧತಿಯನ್ನು ಪತಿ ಕಾರ್ತಿಕ್ ಅಪಹರಣ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳೆಯ ಕುಟುಂಬಸ್ಥರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಿದ್ದಾರೆ. ಅಪಹರಣದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನರಸಿಪುರ ಗ್ರಾಮದ ಕಾರ್ತಿಕ್ ಜೊತೆ ಅನುಂಧತಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಗಂಡು ಮಗು ಇದೆ. ಆರು ತಿಂಗಳ ಹಿಂದೆ ಪತಿ ಕಾರ್ತಿಕ್ ಮತ್ತು ಕುಟುಂಬಸ್ಥರು ಅನುಂಧತಿ ಮತ್ತು ಮಗನನ್ನು ಮನೆಯಿಂದ ಹೊರ ಹಾಕಿದ್ದರು. ಇದರಿಂದ ಅನುಂಧತಿ ತನ್ನ ಮಗನೊಂದಿಗೆ ಹೊನ್ನಾಳಿಯ ದಿಡಗೂರು ಗ್ರಾಮದ ಅತ್ತೆ ಮನೆ ಸೇರಿದ್ದರು. ಜ.12 ರಂದು ಪತಿ ಕಾರ್ತಿಕ್ ಮತ್ತು ಕುಟುಂಬಸ್ಥರು ಮನೆಗೆ ನುಗ್ಗಿ ಅನುಂಧತಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
’ನಾಲ್ಕೈದು ಜನ ಮನೆಗೆ ನುಗ್ಗಿ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ’:ಅನುಂಧತಿ ಅತ್ತೆ ಭಾನುಮತಿ ಪ್ರತಿಕ್ರಿಯಿಸಿ," ಪೋಷಕರಿಲ್ಲದ ಅನುಂಧತಿಯನ್ನು ವರದಕ್ಷಿಣೆ ಕೊಟ್ಟು ಕಾರ್ತಿಕ್ ಜೊತೆ ಮದುವೆ ಮಾಡಿಕೊಟ್ಟಿದ್ದೆವು. ಪತ್ನಿ ಕಾರ್ತಿಕ್ ವರದಕ್ಷಿಣೆಗೋಸ್ಕರ ಅನುಧಂತಿಗೆ ಕಿರುಕುಳ ನೀಡಿ, ಮನೆಯಿಂದ ಹೊರ ಹಾಕಿದ್ದ. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಅನುಂಧತಿ ನನಗೆ ಹೇಳಿದ್ದಳು. ಆದ್ದರಿಂದ ವಿಚ್ಛೇದನ ನೀಡಲು ನಿರ್ಧರಿಸಿ ನಮ್ಮ ಮನೆಯಲ್ಲಿದ್ದಳು. ಜ.12 ರಂದು ಏಕಾಏಕಿ ನಾಲ್ಕೈದು ಜನ ಮನೆ ನುಗ್ಗಿ ಹಲ್ಲೆ ಮಾಡಿ ಅನುಂಧತಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇವೆ" ಎಂದರು.