ಹುಬ್ಬಳ್ಳಿ: ಹೊಸ ರೂಪ ಪಡೆದ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ ಇಂದು ಲೋಕಾರ್ಪಣೆ ಆಯಿತು. ಹೈಟೆಕ್ ಸ್ಪರ್ಶದ ಪಡೆದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಸೋಮವಾರದಿಂದ (ಜ.13) ಸಾರಿಗೆ ಸೇವೆ ಸಿಗಲಿದೆ.
ಹಳೇ ಬಸ್ ನಿಲ್ದಾಣದ ಆವರಣದಲ್ಲಿ ಹುಬ್ಬಳ್ಳಿ - ಧಾರವಾಡ ಸ್ಮಾರ್ಟ್ ಸಿಟಿ ಅನುದಾದಡಿಯಲ್ಲಿ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಳೇ ಬಸ್ ನಿಲ್ದಾಣವನ್ನು ಹೊಸದಾಗಿ ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದೆ. ಇದನ್ನು ಸುಸಜ್ಜಿತವಾಗಿ ಅಧಿಕಾರಿಗಳು ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಅಭಿವೃದ್ಧಿ ದೃಷ್ಟಿಕೋನ ಮುಂದಿಟ್ಟುಕೊಂಡು ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಇದೇ ತಿಂಗಳಲ್ಲಿ ಹೊಸುರು ವೃತ್ತದ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು. 2051 ಕ್ಕೆ ಶೇ.50 ರಷ್ಟು ನಗರಗಳು ಅಭಿವೃದ್ಧಿ ಹೊಂದಬೇಕು ಎಂಬ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಭಾರತ ದೇಶ ಬೆಳೆಯುತ್ತಿದ್ದು, ಹೂಡಿಕೆಯಲ್ಲಿ ಸಹ ಮುನ್ನುಗ್ಗುತ್ತಿದೆ. ಎಫ್ಡಿಐ ಹೆಚ್ಚಳ ಆಗುತ್ತಿದೆ. 180 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದ್ದು, ಅದನ್ನು ಸುಸಜ್ಜಿತವಾಗಿ ನಿರ್ವಹಣೆ ಮಾಡುವುದೇ ಸವಾಲಾಗಿ ಪರಿಣಮಿಸಿದೆ. ನಗರ ಸಾರಿಗೆ, ಕುಡಿಯುವ ನೀರು, ಸ್ಥಳೀಯ ಸಾರಿಗೆ ಹಾಗೂ ವಿದ್ಯುತ್ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ತೋಳನಕೆರೆಯನ್ನು ಸಹ ಅಭಿವೃದ್ಧಿ ಮಾಡಲಾಗಿದೆ. ಇಂದಿರಾ ಗಾಜಿನ ಮನೆ ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ಹಾಳಾಗುತ್ತಿದೆ. ಹೀಗಾಗಿ ಯೋಜನೆಗಳು ಲೋಕಾರ್ಪಣೆಗೊಂಡ ಬಳಿಕ ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದರು.
300 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ನಾಲ್ಕು ವಿಮಾನಗಳನ್ನು ಹೆಚ್ಚಿಸಲು ಯೋಜಿಸಲಾಗಿದೆ. ದಾವಣಗೆರೆ, ತುಮಕೂರು ನೇರ ರೈಲ್ವೆ ಮಾರ್ಗಕ್ಕೆ ಒತ್ತು ನೀಡಲಾಗುತ್ತಿದೆ. ಇದರಿಂದ ಹುಬ್ಬಳ್ಳಿ ಬೆಂಗಳೂರು ನಡುವಿನ ರೈಲ್ವೆ ಸಂಚಾರ ಅವಧಿಯಲ್ಲಿ ಒಂದು ಗಂಟೆ ಕಡಿಮೆಯಾಗಲಿದೆ. ಅಲ್ಲದೇ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ. ಪಕ್ಷಭೇದ ಮರೆತು ಅಭಿವೃದ್ಧಿ ಕಾಮಗಾರಿಗಳಿಗೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಕ್ಷಾತೀತವಾಗಿ ನಾವು ಕೆಲಸ ಮಾಡಬೇಕಿದೆ. ಬೆಂಗಳೂರು ನಗರಗಳಂತೆ ಮಂಗಳೂರು, ಬೆಳಗಾವಿ, ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳು ಬೆಳೆಯುತ್ತಿವೆ. ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಕೇಂದ್ರ ಸರ್ಕಾರ 10 ವರ್ಷಕ್ಕೆ ನೀಡುವ 2 ಸಾವಿರ ಕೋಟಿ ರೂ. ಅನುದಾನವನ್ನು ಈಗ ನೀಡಿದರೆ ಅಭಿವೃದ್ಧಿ ಸಾಧನೆಗೆ ಪೂರಕವಾಗಲಿದೆ. ಹುಬ್ಬಳ್ಳಿ ಧಾರವಾಡ ನಗರಗಳು ಸಹ ಅಭಿವೃದ್ಧಿ ಹೊಂದಲಿವೆ. ಅಲ್ಲದೇ ಯೋಜನೆಗಳನ್ನು ಉದ್ಘಾಟನೆಯಾದ ಬಳಿಕ ಎಜೆನ್ಸಿಗಳು ಅವುಗಳನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡಲು ಅವಕಾಶ ಒದಗಿಸಬೇಕು ಎಂದರು.
ಅಭಿವೃದ್ಧಿಯಲ್ಲಿ ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ದಿನಗಳ ಹಿಂದೆ ಬಸ್ ದರವನ್ನು ಶೇ.15 ರಷ್ಟು ಏರಿಕೆ ಮಾಡಲಾಯಿತು. ಆದರೆ ಕರ್ನಾಟಕ ಅತೀ ಹೆಚ್ಚು ಅಂದರೆ 25 ಸಾವಿರಕ್ಕೂ ಅಧಿಕ ಸರ್ಕಾರಿ ಬಸ್ಗಳನ್ನು ಹೊಂದಿರುವ ರಾಜ್ಯವಾಗಿದೆ. ಇದು ಎಲ್ಲ ಕನ್ನಡಿಗರೂ ಹೆಮ್ಮೆ ಪಡಬೇಕಾದ ವಿಷಯ. 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಒಂದು ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಟ್ರಿಪ್ ಮಾಡಲಾಗುತ್ತಿದೆ. ದಿನನಿತ್ಯ ಸುಮಾರು 1.16 ಕೋಟಿ ಜನರು ಬಸ್ಗಳಲ್ಲಿ ಪ್ರಯಾಣಿಸುತ್ತಾರೆ. ಶೇ.65 ರಷ್ಟು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. 5300 ಹೊಸ ಬಸ್ ಖರೀದಿ ಮಾಡಲಾಗಿದೆ. 4 ಸಾವಿರ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಡಿಸೇಲ್ ದರ ಹೆಚ್ಚಳ ಆಗಿರುವುದರಿಂದ ಬಸ್ ದರ ಹೆಚ್ಚಿಸಲಾಗಿದೆ. ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬಸ್ ದರ ಕಡಿಮೆಯಿದೆ. ಹುಬ್ಬಳ್ಳಿ ಧಾರವಾಡ ನಗರಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಯೆಡೆಗೆ ಕೊಂಡೊಯ್ಯಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಹಳೇ ಬಸ್ ನಿಲ್ದಾಣ ಅಭಿವೃದ್ಧಿ : 3.7 ಎಕರೆ ಪ್ರದೇಶದಲ್ಲಿ 50.58 ಕೋಟಿ ರೂ. ವೆಚ್ಚದಲ್ಲಿ 2,75,000 ಚದರ್ ಅಡಿಯಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿದೆ.
ಯೋಜನೆಯ ಪ್ರಮುಖ ಅಂಶಗಳು :ಬಸ್ ನಿಲ್ದಾಣದ ನೆಲಮಾಳಿಗೆಯನ್ನು ಪಾರ್ಕಿಂಗ್ಗೆ ಮೀಸಲಿಡಲಾಗಿದೆ. ಇಲ್ಲಿ 84 ನಾಲ್ಕು ಚಕ್ರಗಳ ವಾಹನಗಳು, 60 ಎರಡು ಚಕ್ರಗಳ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಅಗ್ನಿ ಅವಘಡ ಸಂಭವಿಸಿದರೆ ಫೈರ್ ಟ್ಯಾಂಕ್ ಹಾಗೂ ನೀರಿನ ಟ್ಯಾಂಕ್ ನಿಲ್ಲಿಸುವ ವ್ಯವಸ್ಥೆ ಜೊತೆಗೆ 2 ಲಿಫ್ಟ್ ಸೌಲಭ್ಯ, ಸ್ವಯಂಚಾಲಿತ ಪಂಪ್ಗಳೊಂದಿಗೆ ಚರಂಡಿ ವ್ಯವಸ್ಥೆಯೂ ಇದೆ.
ಕೆಳ ಮಹಡಿ :ನಗರ ಸಾರಿಗೆ ಸೇವೆಗೆ 8 ಫ್ಲ್ಯಾಟ್ ಫಾರ್ಮ್, ಬಿಆರ್‌ಟಿಎಸ್ ಬಸ್ ಸೇವೆಗೆ 6 ಫ್ಲ್ಯಾಟ್ ಫಾರ್ಮ್ ಮತ್ತು ಸ್ಥಗಿತ ಬಸ್ ನಿಲುಗಡೆಗೆಗೂ ಜಾಗ ಕಲ್ಪಿಸಲಾಗಿದೆ. ಸ್ಥಗಿತ ನಿಲುಗಡೆಯಲ್ಲಿ ವಿದ್ಯುತ್ ಚಾರ್ಜಿಂಗ್ ಸೌಲಭ್ಯವೂ ಇದೆ.