ಹುಬ್ಬಳ್ಳಿ: ಅವಳಿನಗರ ಹುಬ್ಬಳ್ಳಿ- ಧಾರವಾಡದ ನಿರಂತರ ಕುಡಿಯುವ ನೀರಿನ ಕಾಮಗಾರಿ ಕುಂಟುತ್ತಾ ಸಾಗಿದೆ. ಅವಳಿ ನಗರದ 46 ವಾರ್ಡ್‌ಗಳಲ್ಲಿ 24x7 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ವಿಶ್ವ ಬ್ಯಾಂಕ್, ರಾಜ್ಯ ಸರ್ಕಾರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಒಟ್ಟು 931 ಕೋಟಿ ಅನುದಾನದಲ್ಲಿ 2020ರಲ್ಲಿ ಕಾಮಗಾರಿ ಆರಂಭವಾಗಿದ್ದು, 2025ರಲ್ಲಿ ಕಾಮಗಾರಿ ಮುಗಿಯಬೇಕಾಗಿತ್ತು. ಕೋವಿಡ್‌ನಿಂದಾಗಿ ಕಾಮಗಾರಿ ಆರಂಭದಲ್ಲಿ ಒಂದು ವರ್ಷ ತಡವಾಗಿ ಆರಂಭವಾಗಿತ್ತು. ಈವರೆಗೆ ಶೇ 35ರಷ್ಟು ಕಾಮಗಾರಿ ಮಾತ್ರ ನಡೆದಿದೆ.
ಹೀಗಾಗಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಯುವುದು ಅನುಮಾನವಾಗಿದೆ. ಕಾಮಗಾರಿ ಗುತ್ತಿಗೆಯನ್ನು ಎಲ್ ಅಂಡ್ ಟಿ ಕಂಪನಿಗೆ ವಹಿಸಲಾಗಿದ್ದು, ಹುಧಾ ಮಹಾನಗರ ಪಾಲಿಕೆಯಿಂದ ಅನುಷ್ಠಾನ ಮಾಡಲಾಗುತ್ತಿದೆ. ಕೆಯುಐಡಿಎಫ್‌ಸಿಯನ್ನು ಯೋಜನೆಯ ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ಸದ್ಯ ಪೈಪ್‌ಲೈನ್ ಅಳವಡಿಕೆ, ಓವರ್‌ಹೆಡ್ ಟ್ಯಾಂಕ್ ಹಾಗೂ ನೆಲಮಟ್ಟದ ಟ್ಯಾಂಕ್ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾಹಿತಿ (ETV Bharat) ಈ ಕುರಿತಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. "ನಿರಂತರ ಕುಡಿಯುವ ನೀರಿನ ಕಾಮಗಾರಿಯನ್ನು ಎಲ್ ಅಂಡ್ ಟಿ ಕಂಪನಿಗೆ ವಹಿಸಲಾಗಿದೆ. ಅಗ್ರಿಮೆಂಟ್ ಪ್ರಕಾರ 2025ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಐದು ಹಂತಗಳಲ್ಲಿ ಕಾಮಗಾರಿ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಹಂತದ ರಾ ವಾಟರ್ ಟ್ರಿಟ್ಮೆಂಟ್ ಮೆನ್ ಲೈನ್ 29 ಕಿಮೀ. ಇದೆ. ಅದಾದ ನಂತರ ಅಮೀನಭಾವಿ ಡ್ಲುಟಿಬಿ ಸೆಂಟರ್ಗೆ ಬರುತ್ತದೆ. ಅದಾದ ನಂತರ ಸಿಡ್ಲುಟಿಬಿಗೆ ಅಂದರೆ ಶುದ್ಧ ಕುಡಿಯುವ ನೀರಿನ ಘಟಕ್ಕೆ ಬರುತ್ತದೆ. 75 ಕಿಮೀ ಇದೆ. ಅದಾದ ನಂತರ ಓವರ್ ಹೆಡ್ ಟ್ಯಾಂಕರ್ಗಳಿಗೆ ನೀರು ಸರಬರಾಜು ಆಗುತ್ತದೆ. ಈಗಾಗಲೇ 54 ಟ್ಯಾಂಕ್ಗಳಿದ್ದು, ಹೆಚ್ಚುವರಿಯಾಗಿ 24 ಟ್ಯಾಂಕ್ಗಳನ್ನು ಎಲ್ಎನ್ಟಿಯಿಂದ ಕಟ್ಟಲಾಗುತ್ತಿದೆ".
ಡಿಸ್ಟ್ರಿಬ್ಯೂಷನ್ ಲೈನ್ ಕಾಮಗಾರಿ ನಡೆಯಬೇಕಿದೆ:"ಇದಾದ ನಂತರ 82 ವಾರ್ಡ್ಗಳಿಗೆ ಡಿಸ್ಟ್ರಿಬ್ಯೂಷನ್ ಲೈನ್ ಕಾಮಗಾರಿ ನಡೆಯಬೇಕಿದೆ. ಮೊದಲ ಹಂತದಿಂದ ಕೊನೆ ಹಂತದವರೆಗೆ ಕಾಮಗಾರಿ ನಡೆಯುತ್ತಿದೆ. ಅದರಲ್ಲಿ ರಾವಾಟರ್ ಲೈನ್ ಕಾಮಗಾರಿಯಲ್ಲಿ 200 ಮೀಟರ್ ಬಿಟ್ಟರೆ 29ವರೆ ಕಿ.ಮೀ. ಪೈಪ್ ಲೈನ್ ಕಾಮಗಾರಿ ಮುಗಿದಿದೆ. ಇದರಲ್ಲಿ ಉತ್ತಮ ಪ್ರಗತಿಯಾಗಿದೆ. ಇದು ಮಲಪ್ರಭಾ ಡ್ಯಾಂನಿಂದ ಅಮೀನಭಾವಿವರೆಗೆ ಇದೆ. ಇದಾದ ನಂತರ ಅಮೀನಬಾವಿಯಿಂದ ರಾಯಪುರವರೆಗೆ 0-17 ಕಿ.ಮೀ. ಸಮಸ್ಯೆ ಇತ್ತು. ಇದರಲ್ಲಿ 8.5 ಕಿ.ಮೀ. ಕಾಮಗಾರಿ ಮುಗಿದೆ. ಉಳಿದ ಎಂಟು ಕಿ.ಮೀ. ರೈತರನ್ನು ಮನವೊಲಿಸಿ ಕಾಮಗಾರಿ ಮಾಡಲಾಗುತ್ತಿದೆ. ಇದನ್ನು ಹೊರತುಪಡಿಸಿ 2 ಓವರ್ ಹೆಡ್ ಟ್ಯಾಂಕ್ ಬಿಟ್ಟರೆ 22 ಟ್ಯಾಂಕ್ಗಳ ಕಾಮಗಾರಿ ಶೇ.70-80 ರಷ್ಟು ಮುಗಿದಿವೆ".
"ಪ್ರಮುಖ ಸವಾಲಾಗಿರುವ ಡಿಸ್ಟ್ರಿಬ್ಯೂಷನ್ ನೆಟವರ್ಕ್ ಅದರಲ್ಲಿ 1,638 ಕಿ.ಮೀ. ಮಾಡಬೇಕಿತ್ತು. ಆದರೆ ಈ ಮೊದಲು 300 ಕಿಮೀ ಪೈಪ್ ಲೈನ್ ಹಾಕಲಾಗಿತ್ತು. ಕಳಪೆ ಪೈಪ್ ಇರುವದರಿಂದ ಸರ್ಕಾರದ ಆದೇಶದಂತೆ ಅದನ್ನು ತೆರವುಗೊಳಿಸಿ ಮರು ಪೈಪ್ ಲೈನ್ ಹಾಕಲು ಸೂಚನೆ ನೀಡಲಾಗಿದೆ. ಅದರ ಜೊತೆಗೆ ಮಾರ್ಗಸೂಚಿಯಂತೆ ಹೊಸದಾಗಿ 300 ಕಿಮೀ ಪೈಪ್ ಲೈನ್ ಮಾಡಲಾಗಿದೆ. ಈಗಾಗಲೇ 62 ಜೋನ್ಗಳ ಪೈಕಿ 15 ಜೋನ್ಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಒಂದು ವರ್ಷ ಹೆಚ್ಚುವರಿ ಕಾಲಾವಕಾಶವನ್ನು ಎಲ್ಎನ್ಟಿ ಕಂಪನಿ ಮೌಖಿಕವಾಗಿ ಕೇಳಿದೆ. ಆದರೆ ಅಧಿಕೃತವಾಗಿ ಯಾವುದೇ ಪತ್ರದ ಮುಖೇನ ಕೇಳಿಲ್ಲ. ಕಾಮಗಾರಿ ಪೂರ್ಣಗೊಳಿಸಲು 2025ರವರೆಗೆ ಕಾಲಾವಕಾಶವಿದೆ. ಕಂಪನಿಯ ಕಾಮಗಾರಿಯ ವೇಗದ ಮೇಲೆ ನಿರ್ಧಾರ ತಗೆದುಕೊಳ್ಳಬೇಕಾಗುತ್ತದೆ" ಎಂದು ಮಾಹಿತಿ ನೀಡಿದರು.
ಪ್ರಾಯೋಗಿಕವಾಗಿ 11 ವಾರ್ಡ್‌ಗಳಲ್ಲಿ ಜಾರಿ: 13 ವರ್ಷಗಳ ಹಿಂದೆ ಅವಳಿ ನಗರದ 8 ವಾರ್ಡ್‌ಗಳಲ್ಲಿ (ಮರುವಿಂಗಡಣೆ ನಂತರ 11 ವಾರ್ಡ್) ಪ್ರಾಯೋಗಿಕವಾಗಿ 24X7 ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೆ ತರಲಾಗಿದ್ದು, 16,786 ಮನೆಗಳಿಗೆ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಬಡವರು, ಮಧ್ಯಮವರ್ಗದವರು, ಕೊಳೆಗೇರಿ ನಿವಾಸಿಗಳು, ಶ್ರೀಮಂತರು ಸೇರಿದಂತೆ ಎಲ್ಲ ವರ್ಗದವರು ಇರುವ ವಾರ್ಡ್‌ಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಪ್ರಾಯೋಗಿಕ ಯೋಜನೆ ಯಶಸ್ವಿಯಾದ ನಂತರ ಉಳಿದ ವಾರ್ಡ್‌ಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ.
ಇದನ್ನೂ ಓದಿ:ಹುಬ್ಬಳ್ಳಿ ಧಾರವಾಡದ ಕಸದ ಬೆಟ್ಟಗಳಿಗೆ ಕೊನೆಗೂ ಮುಕ್ತಿ: ಬಯೋ ಮೈನಿಂಗ್ ಮೂಲಕ ತ್ಯಾಜ್ಯ ಕರಗಿಸುವ ಕೆಲಸ ಶುರು