ಮೈಸೂರು: ನೇತ್ರದಾನ, ಕಿಡ್ನಿದಾನ ಹೀಗೆ ಅಂಗಾಂಗಗಳ ದಾನದ ಬಗ್ಗೆ ನಾವು ಕೇಳಿದ್ದೇವೆ. ಅಂತೆಯೇ ಅಂಗಾಂಗಗಳು ಮಾತ್ರವಲ್ಲ, ನಮ್ಮ ದೇಹವನ್ನು ದಾನ ಮಾಡುವ ಮೂಲಕವೂ ಮನುಷ್ಯ ತಾನು ಸತ್ತ ನಂತರ ಇತರರಿಗೆ ಸಹಾಯವಾಗುವಂತೆ ಬದುಕಬಹುದು. ಹಾಗಾದರೆ ದೇಹದಾನ ಮಾಡುವುದು ಹೇಗೆ? ಪ್ರಕ್ರಿಯೆಗಳೇನು? ದೇಹದಾನದಿಂದ ಆಗುವ ಅನುಕೂಲವೇನು? ಎಂಬುದರ ಬಗ್ಗೆ ಜೆಎಸ್ಎಸ್ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಅಂಗರಚನಾ ಶಾಸ್ತ್ರದ ಮುಖ್ಯಸ್ಥೆ ಡಾ.ವಿದ್ಯಾ ಸಿ.ಎಸ್. ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ದೇಹದಾನ ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ?:"ದೇಹದಾನ ಮಾಡಲು ಇಚ್ಛಿಸುವವರು ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ದೇಹ ದಾನದ ಕುರಿತು ನೀಡುವ ಅರಿವು ಕಾರ್ಯಕ್ರಮಗಳು ಅಥವಾ ಜಾಹೀರಾತುಗಳ ಮೂಲಕ ವೈದ್ಯಕೀಯ ಸಂಶೋಧನಾ ಸಂಸ್ಥೆಯನ್ನು ಸಂಪರ್ಕಿಸಿ ದೇಹ ದಾನದ ಅರ್ಜಿ ಫಾರಂ ಪಡೆದುಕೊಳ್ಳಬೇಕು. ನಂತರ ಅಗತ್ಯವಾದ ಎಲ್ಲಾ ವೈಯಕ್ತಿಕ ಮಾಹಿತಿ (ಮನೆಯ ವಿಳಾಸ, ಫೋನ್ ನಂಬರ್, ಸಂಬಂಧಿಕರ ದೂರವಾಣಿ ಸಂಖ್ಯೆ) ಇನ್ನಿತರ ಮಾಹಿತಿಯನ್ನು ಫಾರಂನಲ್ಲಿ ಭರ್ತಿ ಮಾಡಿ, ದೇಹದಲ್ಲಿ ಇರುವ ಮಚ್ಚೆ, ಗಾಯದ ಗುರುತು ಇತರ ಯಾವುದಾದರೂ ಗುರುತುಗಳನ್ನು ನಮೂದಿಸಿ ಭಾವಚಿತ್ರವನ್ನು ದೇಹ ದಾನದ ಅರ್ಜಿಗೆ ಅಂಟಿಸಬೇಕು."
"ವಿಳಾಸದ ಮಾಹಿತಿಗಾಗಿ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು ಮತ್ತು ಸ್ವ-ಇಚ್ಛೆಯಿಂದ ದೇಹದಾನ ಮಾಡುತ್ತೇನೆ ಎನ್ನುವ ಹೇಳಿಕೆಯನ್ನು ಅರ್ಜಿಯಲ್ಲಿ ನಮೂದಿಸಿ ಸಹಿ ಹಾಕಬೇಕು. ಇದರ ಜೊತೆಗೆ ದೇಹ ದಾನ ಮಾಡುವವರ ಸಂಬಂಧಿಕರಲ್ಲಿ ಯಾರಾದರೂ ಇಬ್ಬರು ಸಾಕ್ಷಿಯಾಗಿ ಅರ್ಜಿಯಲ್ಲಿ ಸಹಿ ಮಾಡಬೇಕು. ಇಷ್ಟು ಮಾಹಿತಿಯೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ದೇಹ ದಾನ ಮಾಡಲು ಇಚ್ಛಿಸುವ ವೈದ್ಯಕೀಯ ಶಿಕ್ಷಣ ಸಂಶೋಧನಾ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ವೈದ್ಯಕೀಯ ಶಿಕ್ಷಣ ಸಂಸ್ಥೆ ಪರಿಶೀಲಿಸಿ, ಸ್ವೀಕೃತಿ ಪತ್ರ ನೀಡುತ್ತದೆ. ಇದರಲ್ಲಿ, ದೇಹ ದಾನ ಮಾಡಿದ ವ್ಯಕ್ತಿಗೆ ಸಲಹೆ ಮತ್ತು ಸೂಚನೆಗಳು, ಮರಣದ ನಂತರ ದೇಹದಾನಕ್ಕೆ ಅಗತ್ಯ ಕ್ರಮಗಳ ಕುರಿತು ಮಾಹಿತಿ ನೀಡಲಾಗಿರುತ್ತದೆ" ಎಂದು ಅವರು ಮಾಹಿತಿ ನೀಡಿದರು.
ಮರಣಾನಂತರ ದೇಹವನ್ನು ಒಪ್ಪಿಸುವ ಪ್ರಕ್ರಿಯೆ ಹೇಗೆ?:"ದೇಹ ದಾನ ಮಾಡಲಿಚ್ಛಿಸುವವರು ದೇಹದಾನದ ಬಗ್ಗೆ ತಮ್ಮ ಸಂಬಂಧಿಕರಿಗೆ ಮೊದಲೇ ತಿಳಿಸಿರಬೇಕು. ಮರಣ ಹೊಂದಿದ ನಂತರ ಸಂಬಂಧಿಕರು ದೇಹದ ದಾನ ನೀಡಿರುವ ಸಂಸ್ಥೆಗೆ ತಿಳಿಸಬೇಕು. ಮರಣ ಹೊಂದಿದ ವ್ಯಕ್ತಿಯ ಆಧಾರ್ ಕಾರ್ಡ್ ಜೊತೆಗೆ ಮರಣ ಪ್ರಮಾಣ ಪತ್ರವನ್ನು ಸಂಶೋಧನಾ ಸಂಸ್ಥೆಗೆ ಸಲ್ಲಿಸಬೇಕು. ನಮ್ಮಲ್ಲಿ 3,000 ಸಾವಿರಕ್ಕೂ ಹೆಚ್ಚಿಗೆ ಜನರು ದೇಹದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 500ಕ್ಕೂ ಹೆಚ್ಚು ದೇಹಗಳನ್ನು ಈಗಾಗಲೇ ಪಡೆದುಕೊಂಡಿದ್ದೇವೆ. ಸತ್ತ ನಂತರ ಅವರ ಅಂತಿಮ ವಿಧಿವಿಧಾನಗಳು ಮತ್ತು ಸಂಬಂಧಿಕರು ನೋಡಿದ ಮೇಲೆ ನಾವು ನಮ್ಮ ಸಂಸ್ಥೆಯಿಂದ ಆಂಬ್ಯುಲೆನ್ಸ್ ಕಳುಹಿಸುತ್ತೇವೆ. ಮೃತದೇಹವನ್ನು ನಮ್ಮ ವಿಭಾಗಕ್ಕೆ ತರಿಸಿಕೊಳ್ಳುತ್ತೇವೆ. ಅದಕ್ಕೆ ಯಾವುದೇ ರೀತಿ ವಾಸನೆ ಬರಬಾರದು ಎಂದು ಇಂಜೆಕ್ಷನ್ ನೀಡುತ್ತೇವೆ" ಎಂದು ಹೇಳಿದರು.