ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಜಲಕ್ಷಾಮ; ನೀರು ಸರಬರಾಜಿಲ್ಲದೆ ಪರಿತಪಿಸುತ್ತಿರುವ ಹೋಟೆಲ್ ಮಾಲೀಕರು

ಈ ಬಾರಿಯ ಬರಗಾಲದಿಂದ ಎಲ್ಲರಿಗೂ ಸಂಕಷ್ಟ ಎದುರಾಗಿದೆ. ರೈತರಿಂದ ಹಿಡಿದು ಜನರು, ಹೋಟೆಲ್​ ಉದ್ಯಮಿಗಳಿಗೂ ಬರದ ಬಿಸಿ ತಟ್ಟಿದೆ. ಬೆಂಗಳೂರಿನಲ್ಲಿ ನೀರು ಸರಬರಾಜು ಇಲ್ಲದೆ ಹೋಟೆಲ್ ಮಾಲೀಕರು ಪರಿತಪಿಸುತ್ತಿದ್ದಾರೆ.

ಬೆಂಗಳೂರು
ಬೆಂಗಳೂರು

By ETV Bharat Karnataka Team

Published : Mar 6, 2024, 8:39 PM IST

ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ. ಸಿ ರಾವ್

ಬೆಂಗಳೂರು :ಅತಿ ಹೆಚ್ಚು ನೀರು ಉಪಯೋಗಿಸುವ ಉದ್ದಿಮೆಗಳು ಹೋಟೆಲ್​ಗಳಾಗಿವೆ. ಬಹುತೇಕ ನಗರದ ಹೋಟೆಲ್ ಗಳಲ್ಲಿ ಬೋರೆವೆಲ್ ಇಲ್ಲ. ಅಂತಹ ಕಡೆ ನೀರಿನ ಕೊರತೆ ಹೆಚ್ಚು ಬಾಧಿಸತೊಡಗಿದೆ. ಟ್ಯಾಂಕರ್​ಗಳನ್ನು ಬುಕ್ ಮಾಡಿದರೆ ತಕ್ಷಣಕ್ಕೆ ನೀರು ಸಿಗದೇ ಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಪಾಲಿಕೆ ಮತ್ತು ಜಲಮಂಡಳಿ ಸಮರೋಪಾದಿಯಲ್ಲಿ ಟ್ಯಾಂಕರ್​ಗಳನ್ನು ವಶಕ್ಕೆ ಪಡೆದು, ಬೋರ್​ಗಳನ್ನು ಕೊರೆಸಿ ಮನೆ ಮನೆಗೆ ನೀರನ್ನು ತಲುಪಿಸುವ ಕಾರ್ಯ ಮಾಡುತ್ತಿವೆ. ಆದರೆ ಹೋಟೆಲ್​ಗಳಿಗೆ ನೀರನ್ನು ತಲುಪಿಸಲು ಅಧಿಕಾರಿಗಳು ಅಸಡ್ಡೆ ವಹಿಸುತ್ತಿದ್ದಾರೆ. ಸಾವಿರಾರು ಜನರು ಬೆಂಗಳೂರಿನ ಹೋಟೆಲ್​ಗಳ ತಿಂಡಿ ತಿನಿಸುಗಳ ಮೇಲೆ ಅವಲಂಬಿತರಾಗಿರುವ ಕಾರಣ ಮುಂದಿನ ದಿನಗಳಲ್ಲಿ ಗ್ರಾಹಕರ ಜೇಬಿಗೂ ಕತ್ತರಿ ಬೀಳುವ ಸಾಧ್ಯತೆ ಇದೆ.

ಸರ್ಕಾರಿ ಇಲಾಖೆಗಳು ನೀರನ್ನು ಮುಂದಿನ ದಿನಗಳಲ್ಲಿ ಹೋಟೆಲ್​ಗಳಿಗೂ ಪೂರೈಸಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ ಖಾಸಗಿ ಟ್ಯಾಂಕರ್​ಗಳನ್ನು ವಶಕ್ಕೆ ಪಡೆಯಲಾಗುತ್ತಿದ್ದು, ಉಳಿದ ಖಾಸಗಿ ಮಾಲೀಕರು ಟ್ಯಾಂಕರ್ ನೀರಿಗೆ 3000 ರೂಪಾಯಿಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅದಕ್ಕೂ ಸಹ ಮೂರು ನಾಲ್ಕು ದಿನ ಕಾಯಬೇಕಿರುವುದು ಹೋಟೆಲ್ ಮಾಲೀಕರಿಗೆ ಹೊಸ ತಲೆನೋವನ್ನು ತಂದಿದೆ.

ಹೋಟೆಲ್​ಗಳಿಗೆ ನೀರು ಸರಬರಾಜು ಮುಖ್ಯವಾಗಿದೆ. ಹೊರೆಯ ಪ್ರಶ್ನೆ ನಂತರದಲ್ಲಿ ಬರುತ್ತದೆ. ಎಲ್ಲರಿಗೂ ನೀರಿನ ಸಮಸ್ಯೆ ಇರುವುದರಿಂದ ಅನುಸರಿಸಿಕೊಂಡು ಹೋಗುತ್ತಿದ್ದೇವೆ. ಬರುವ ದಿನಗಳಲ್ಲಿ ಈ ಪರಿಸ್ಥಿತಿ ಹೀಗೆ ಮುಂದುವರೆದರೆ ತುಂಬಾ ಕಷ್ಟವಾಗಲಿದೆ. ಸದ್ಯಕ್ಕೆ ನೀರು ಪೋಲಾಗದಂತೆ ಉಳಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ನಗರದ ಹಲವು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಈ ಕುರಿತು ಈಟಿವಿ ಭಾರತದ ಜೊತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ. ಸಿ ರಾವ್ ಮಾತನಾಡಿ, ಶೇಕಡಾ 20ರಷ್ಟು ನೀರನ್ನು ಉಳಿಸಲು ಸಾಕಷ್ಟು ಯೋಜನೆಗಳನ್ನು ನಗರದ ಹೋಟೆಲ್​ಗಳು ಹಮ್ಮಿಕೊಂಡಿವೆ. ನೀರು ಪೋಲಾಗುವುದನ್ನು ನಿಲ್ಲಿಸಲು ಸಹ ಹೇಳಿದ್ದೇವೆ. ನೀರಿನ ಸರಬರಾಜು ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ನೀರನ್ನು ಕೊಡಲು ಪ್ರಾರಂಭಿಸಿದ್ದು, ಅದರ ಸಾಧಕ-ಬಾಧಕಗಳನ್ನು ವಿಶ್ಲೇಷಿಸಿ ಮುಂದಿನ ಯೋಜನೆಯನ್ನು ರೂಪಿಸಲಿದ್ದೇವೆ ಎಂದಿದ್ದಾರೆ.

'ಪ್ರಸ್ತುತ ನೀರಿನ ಬಿಕ್ಕಟ್ಟು ದಶಕಗಳಿಂದ ಯೋಜಿತವಲ್ಲದ ಯೋಜನೆಗಳಿಂದ ಆಗಿದೆ. ಅಭಿವೃದ್ಧಿ ಮತ್ತು ಕಳಪೆ ಆಡಳಿತದಲ್ಲಿ ತನ್ನ ಬೇರುಗಳನ್ನು ಹೊಂದಿದೆ. ನಗರದ ಬೆಳವಣಿಗೆಯನ್ನು ಅದರ ಪರಿಸರ ಮತ್ತು ಮಿತಿಗಳಿಗೆ ಸಂಬಂಧಿಸಿದಂತೆ ಯೋಜಿಸಬೇಕು. ಆದರೆ ಬೆಂಗಳೂರಿನ ವಿಚಾರದಲ್ಲಿ, ಸುಸ್ಥಿರ ಅಭಿವೃದ್ಧಿ ಯೋಜನೆಯನ್ನು ಬಿಡಿ, ಅದರ ಮಾಸ್ಟರ್‌ಪ್ಲಾನ್ ಕೂಡ ಇಲ್ಲ' ಎಂದು ಸಿಟಿಜನ್ಸ್ ಅಜೆಂಡಾ ಫಾರ್ ಬೆಂಗಳೂರಿನ ಸಂಚಾಲಕ ಸಂದೀಪ್ ಅನಿರುದ್ಧನ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ :ಸಿಲಿಕಾನ್ ಸಿಟಿಯಲ್ಲಿ ತೀವ್ರ ಜಲಕ್ಷಾಮ : ಶುದ್ಧ ನೀರಿನ ಘಟಕಗಳಲ್ಲೂ ಸಾಲು ಸಾಲು ಜನರು

ABOUT THE AUTHOR

...view details