ಬೆಂಗಳೂರು: ''ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ಆರೋಪ ಪ್ರಕರಣದ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ. ತನಿಖೆಯ ನಂತರವೇ ನಿರ್ಧಾರಕ್ಕೆ ಬರಲಾಗುವುದು'' ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ''ಘಟನೆಯ ಕುರಿತು ಈಗಾಗಲೇ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಜೆಪಿಯವರು ನೀಡಿರುವ ದೂರನ್ನೂ ಸಹ ಅದರ ಜೊತೆಗೆ ಸೇರಿಸಿಕೊಳ್ಳಲಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.
''ಪ್ರಕರಣದಲ್ಲಿ ಎರಡು ರೀತಿಯ ಅಭಿಪ್ರಾಯಗಳಿವೆ. ಕೆಲವರು ಅಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದಿದ್ದಾರೆ. ಇನ್ನೂ ಕೆಲವರು ನಾಸಿರ್ ಹುಸೇನ್ ಜಿಂದಾಬಾದ್ ಎನ್ನಲಾಗಿದೆ ಎಂದಿದ್ದಾರೆ. ಹಾಗಾಗಿ, ಘಟನೆಯ ಕುರಿತು ಮೊದಲು ಸುದ್ದಿ ಪ್ರಸಾರ ಮಾಡಿದವರಿಂದ ಅಲ್ಲಿನ ದೃಶ್ಯಗಳನ್ನ ಪಡೆದುಕೊಂಡು ಎಫ್ಎಸ್ಎಲ್ಗೆ ವೈಜ್ಞಾನಿಕ ಪರಿಶೀಲನೆಗೆ ಕಳಿಸುತ್ತಿದ್ದೇವೆ. ಕೂಗಿದ ವ್ಯಕ್ತಿ, ಆತನ ಅಕ್ಕಪಕ್ಕದಲ್ಲಿದ್ದವರನ್ನು ತನಿಖೆ ಮಾಡಬೇಕು. ಆ ನಂತರದಲ್ಲಿ ಆ ವ್ಯಕ್ತಿ ಪಾಕ್ ಪರ ಘೋಷಣೆ ಕೂಗಿರುವುದು ಸಾಬೀತಾದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ'' ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ವಿಚಾರ ಪ್ರತಿಕ್ರಿಯಿಸಿ, ''ಘಟನೆಯಲ್ಲಿ ಕಾಂಗ್ರೆಸ್ ಪಕ್ಷ ಏನು ತಪ್ಪು ಮಾಡಿದೆ. ಇದರಲ್ಲಿ ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಬಿಜೆಪಿಯವರ ಆರೋಪಗಳು ಮೊದಲಿನಿಂದಲೂ ಇವೆ. ಕಾಂಗ್ರೆಸ್ ಪಕ್ಷ ಮುಸ್ಲಿಂ ಪರ ಇದೆ ಎನ್ನುವುದು ಅವರು ಮೊದಲಿನಿಂದಲೂ ಮಾಡಿಕೊಂಡು ಬಂದಿರುವ ಆರೋಪ. ನಾಸಿರ್ ಹುಸೇನ್ ವರ್ತನೆಯ ಬಗ್ಗೆ ಗಮನಿಸಿಲ್ಲ, ಕೋಪದಲ್ಲಿ ಹೇಳಿರಬೇಕು'' ಎಂದು ಪರಮೇಶ್ವರ್ ತಿಳಿಸಿದ್ದಾರೆ.