ಬೆಂಗಳೂರು:ನಗರದ ಶಿವರಾಮ ಕಾರಂತ ಬಡಾವಣೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದ ಸಮಿತಿಯನ್ನು ವಿಸರ್ಜನೆ ಮಾಡಿರುವ ಹೈಕೋರ್ಟ್, ಸ್ವತಃ ತಾನೇ ಮೇಲ್ವಿಚಾರಣೆ ನಡೆಸಲು ನಿರ್ಧರಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚನೆಯಾಗಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನೊಳಗೊಂಡ ವಿಶೇಷ ವಿಭಾಗೀಯ ಪೀಠ ಈ ನಿರ್ಧಾರಕ್ಕೆ ಬಂದಿದೆ. ಪ್ರಕರಣ ಸಂಬಂಧ 2023ರ ಡಿಸೆಂಬರ್ 12ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ ಸಮಿತಿ ಮುಂದುವರೆಸುವುದು /ವಿಸರ್ಜನೆ ಮಾಡುವುದು ಹೈಕೋರ್ಟ್‌ನ ವಿವೇಚನೆ ಬಿಟ್ಟದ್ದು ಎಂದು ತಿಳಿಸಿದೆ. ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರೂ ಸಹ ಸಮಿತಿ ಮುಂದುವರೆಯುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ನ್ಯಾಯಪೀಠ ತಿಳಿಸಿತು.
ವಿಚಾರಣೆಯಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಸುಪ್ರೀಂ ಕೊರ್ಟ್ ನಿಗದಿಪಡಿಸಿದ ಕೆಲಸವನ್ನು ಕಾರ್ಯಗತಗೊಳಿಸಲು ಸಮಿತಿ ನಡೆಸಿ ಕಾರ್ಯ ಕಲಾಪಗಳಿಗೆ ಸಿಬ್ಬಂದಿಯ ವೇತನವೂ ಸೇರಿದಂತೆ 17,95,10,448 ರೂ.ಗಳು ವೆಚ್ಚವಾಗಿದೆ. ಸಮಿತಿಯ ಪ್ರಕ್ರಿಯೆಯ ದತ್ತಾಂಶಗಳನ್ನು ಸಂಗ್ರಹಿಸುವುದಕ್ಕಾಗಿ ಏಜನ್ಸಿಯೊಂದಕ್ಕೆ 3 ಕೋಟಿ ರೂ.ಗಳ ವೆಚ್ಚ ಮಾಡಲಾಗಿದೆ. ಈ ದತ್ತಾಂಶ ಅಭಿವೃದ್ಧಿ ನಿರ್ವಹಣೆಗೆ 3 ವರ್ಷಗಳಿಂದ 3 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ವೆಚ್ಚ ಮಾಡಲಾಗಿದೆ. ಈ ವೆಚ್ಚ ಬಿಡಿಎ ಅಥವಾ ಸಮಿತಿ ಭರಿಸಿಲ್ಲ. ಆದರೆ, ಸಾರ್ವಜನಿಕರ ಹಣ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.