ಕರ್ನಾಟಕ

karnataka

ETV Bharat / state

ಮಹಿಳೆ ಅಪಹರಣ ಪ್ರಕರಣ: ರೇವಣ್ಣ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ - Woman Abduction Case - WOMAN ABDUCTION CASE

ಸಂತ್ರಸ್ತ ಮಹಿಳೆ ಅಪಹರಣ ಆರೋಪ ಪ್ರಕರಣದಲ್ಲಿ ಶಾಸಕ ಹೆಚ್.ಡಿ.ರೇವಣ್ಣಗೆ ಮಂಜೂರು ಮಾಡಿದ್ದ ಜಾಮೀನು ರದ್ದು ಕೋರಿ ಎಸ್‌ಐಟಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಹೈಕೋರ್ಟ್​ ಕಾಯ್ದಿರಿಸಿದೆ.

revanna case
ಹೆಚ್.ಡಿ.ರೇವಣ್ಣ, ಹೈಕೋರ್ಟ್ (ETV Bharat)

By ETV Bharat Karnataka Team

Published : Aug 1, 2024, 3:14 PM IST

ಬೆಂಗಳೂರು:ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಅಪಹರಣ ಮಾಡಿದ ಆರೋಪದಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರಿಗೆ ಮಂಜೂರು ಮಾಡಿದ್ದ ಜಾಮೀನು ರದ್ದು ಕೋರಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.

ಎಸ್‌ಐಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಎಸ್‌ಐಟಿ ಮತ್ತು ಅರ್ಜಿದಾರರ ಪರ ವಾದ ಆಲಿಸಿ ತೀರ್ಪು ಕಾಯ್ದಿರಿಸಿತು.

ವಿಚಾರಣೆ ವೇಳೆ ಎಸ್‌ಐಟಿ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ''ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ರೇವಣ್ಣ ಅವರು ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಈ ಸಂಬಂಧ ತನಿಖೆ ಸಂದರ್ಭದಲ್ಲಿ ರೇವಣ್ಣ ಭಾಗಿಯಾಗಿರುವುದು ಸಾಬೀತಾಗಿದೆ. ಅಲ್ಲದೆ, ಸಂತ್ರಸ್ತೆ ತನಿಖಾಧಿಕಾರಿಗಳು ಮತ್ತು ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಯಲ್ಲಿ ರೇವಣ್ಣ ವಿರುದ್ಧ ಆರೋಪ ಮಾಡಿದ್ದಾರೆ. ಈ ಆರೋಪವನ್ನು ದಾಖಲಿಸಿಕೊಂಡ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಐಪಿಸಿ 364ಎ ಪ್ರಕಾರ ಯಾವುದೇ ವ್ಯಕ್ತಿಯನ್ನು ಅಪಹರಣದ ಬಳಿಕ ಆತನಿಗೆ ಜೀವ ಭಯ ಇರಲಿದೆ. ಈ ಹಿನ್ನೆಲೆಯಲ್ಲಿ ಜಾಮೀನು ರದ್ದುಪಡಿಸಬೇಕು'' ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿ, ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, ''ಜಾಮೀನು ಮಂಜೂರು ಮಾಡುವುದು ಮತ್ತು ರದ್ದುಪಡಿಸುವ ಪ್ರಕ್ರಿಯೆ ಸಂಪೂರ್ಣವಾಗಿ ವಿಭಿನ್ನವಾಗಿರಲಿದೆ. ಅಲ್ಲದೆ, ರೇವಣ್ಣ ಅವರದ್ದು ಇಡೀ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲ. ಆದರೆ, ಸಂತ್ರಸ್ತೆಯನ್ನು ಅಪಹರಣ ಮಾಡಿದ್ದ ಸತೀಶ್ ಬಾಬಣ್ಣ ಎಂಬವರು ರೇವಣ್ಣ ನಿಮ್ಮನ್ನು ಕರೆದುಕೊಂಡು ಬರುವುದಕ್ಕೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ ಎಂಬ ಆರೋಪವಿದೆ. ಇದು ಶಿಕ್ಷಾರ್ಹ ಅಪರಾಧವಲ್ಲ'' ಎಂದು ತಿಳಿಸಿದರು.

''ಅಲ್ಲದೆ, ಅಪಹರಣಕ್ಕೊಳಗಾದ ಸಂತ್ರಸ್ತೆ ಸಣ್ಣ ಮಗುವಲ್ಲ. ಹೀಗಾಗಿ ಅಪಹರಣ ಆರೋಪ ಎದುರಾಗುವುದಿಲ್ಲ. ಜೊತೆಗೆ, ಐಪಿಸಿ ಸೆಕ್ಷನ್ 362ರ ಪ್ರಕಾರ ಅಪಹರಣಕ್ಕೊಳಗಾದವರಿಗೆ ಮೋಸ ಮಾಡುವ ಉದ್ದೇಶವಿರಬೇಕು. ಈ ಪ್ರಕರಣದಲ್ಲಿ ಆ ಉದ್ದೇಶವಿಲ್ಲ. ಸಂತ್ರಸ್ತೆಯಾಗಿರುವವರು ರೇವಣ್ಣ ಮನೆಯ ಕೆಲಸದವರಾಗಿದ್ದಾರೆ. ಆದ್ದರಿಂದ ಮೋಸ ಮಾಡುವ ಹಾಗೂ ಬೆದರಿಕೆ ಹಾಕುವ ಉದ್ದೇಶವಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸಬೇಕು'' ಎಂದು ಕೋರಿದರು.

ಪ್ರಕರಣದ ಹಿನ್ನೆಲೆ:ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಂತ್ರಸ್ತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಲ್ಲದೇ, ಅತ್ಯಾಚಾರವೆಸಗಿರುವ ಆರೋಪವಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಂತ್ರಸ್ತೆಯನ್ನು ಅಪಹರಣ ಮಾಡಲಾಗಿತ್ತು. ಆ ಮೂಲಕ ಸಂತ್ರಸ್ತೆ ಪ್ರಕರಣ ಸಂಬಂಧ ಯಾವುದೇ ಆರೋಪ ಹೊರಬಾರದಂತೆ ನಿಯಂತ್ರಣ ಮಾಡಲಾಗಿದೆ ಎಂದು ದೂರಲಾಗಿತ್ತು. ಈ ಸಂಬಂಧ ಸಂತ್ರಸ್ತೆಯ ಮಗ ದೂರು ದಾಖಲಿಸಿದ್ದರು.

ಇದನ್ನೂ ಓದಿ:ಮನೆಯೂಟಕ್ಕೆ ದರ್ಶನ್​ ಅರ್ಜಿ: ಎಲ್ಲಾ ವಿಚಾರಣಾಧೀನ ಕೈದಿಗಳು ಒಂದೇ ಎಂದ ಹೈಕೋರ್ಟ್​ - DARSHAN PLEA FOR HOME FOOD

ABOUT THE AUTHOR

...view details