ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ)ಯಡಿ ದಾಖಲಿಸಿದ್ದ ಪ್ರಕರಣ ಮತ್ತು ಆ ಸಂಬಂಧ ಜಾರಿ ಮಾಡಿದ್ದ ಸಮನ್ಸ್‌ಅನ್ನು ಹೈಕೋರ್ಟ್ ವಜಾ ಮಾಡಿದೆ.
ಪಿಎಂಎಲ್‌ಎ ಸೆಕ್ಷನ್ 50ರ ಅಡಿ 2023ರ ಫೆಬ್ರವರಿ 2ರಂದು ಜಾರಿ ನಿರ್ದೇಶನಾಲಯವು ಜಾರಿ ಮಾಡಿರುವ ಸಮನ್ಸ್ ವಜಾ ಮಾಡುವಂತೆ ಕೋರಿ ಕಪಿಲ್ ಮೋಹನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ಅಂಗೀಕರಿಸಿದೆ. ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ ಬಳಿಕ ಸಲ್ಲಿಸಿದ್ದ ಬಿ ಅಂತಿಮ ವರದಿಯನ್ನು ವಿಚಾರಣಾಧೀನ ನ್ಯಾಯಾಲಯ ಒಪ್ಪಿಕೊಂಡಿದೆ. ಹೀಗಾಗಿ, ಬಿ ಅಂತಿಮ ವರದಿಗೆ ಸಂಬಂಧಿಸಿದ ಆದೇಶ ತಾರ್ಕಿಕ ಅಂತ್ಯ ಕಂಡಿದೆ ಎಂದು ಹೈಕೋರ್ಟ್ ತಿಳಿಸಿದೆ.
ಮುಂದುವರಿದು, ಇದೇ ನ್ಯಾಯಾಲಯದ ಮತ್ತೊಂದು ಪೀಠವು ಈ ಪ್ರಕರಣದ ವಿಚಾರವನ್ನು ಪರಿಗಣಿಸಿ ಎರಡನೇ ಆರೋಪಿಯ ಅರ್ಜಿಯನ್ನು ಪುರಸ್ಕರಿಸಿದೆ. ಸುಪ್ರೀಂ ಕೋರ್ಟ್ ವಿಜಯ ಮದನ್ ಲಾಲ್ ಚೌಧರಿ ಪ್ರಕರಣ ಆಧರಿಸಿ ರಿಚಾ ಸೆಕ್ಷೇನಾ ಅವರ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕ್ರಿಯೆಯನ್ನು 2023ರ ಮೇ 30ರಂದು ವಜಾ ಮಾಡಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ. ಈ ಪ್ರಕರಣದಲ್ಲಿ ಕಪಿಲ್ ಮೋಹನ್ ಅವರು ಮೊದಲ ಆರೋಪಿಯಾಗಿದ್ದಾರೆ.