ಬೆಂಗಳೂರು: ಭಾರತೀಯ ಕಾನೂನು ವರದಿಗಳು ಮತ್ತು ಕರ್ನಾಟಕ ತೀರ್ಪುಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸುವ ಸಲುವಾಗಿ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಇ-ಐಎಲ್ಆರ್(ಇಂಡಿಯನ್ ಲಾ ರಿಪೋರ್ಟ್ಸ್-ಭಾರತೀಯ ಕಾನೂನು ವರದಿಗಳು)ಗಳನ್ನು ಹೈಕೋರ್ಟ್ ಪರಿಚಯಿಸಿದೆ.
ಭಾಷಾಂತರಿಸಿದ ತೀರ್ಪುಗಳ ಜೊತೆಗೆ ಡಿಜಿಟಲ್ ಕಾನೂನು ವರದಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸುವ ಕೃತಕ ಬುದ್ಧಿಮತ್ತೆ ಆಧಾರಿತ ಕಾನೂನು ಭಾಷಾಂತರ ಸಲಹಾ ಸಮಿತಿಯ ಉದ್ದೇಶವನ್ನು ದ್ವಿಭಾಷಾ ಇ-ಐಎಲ್ಆರ್ ಪೋರ್ಟಲ್ ಈಡೇರಿಸುತ್ತಿದೆ. 2023ರ ಡಿಸೆಂಬರ್ 16ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಅನಾವರಣಗೊಳಿಸಿದ್ದು, ಇದರ ಭಾಗವಾಗಿ ಪೋರ್ಟಲ್ ಈಗ ಪ್ರಾರಂಭವಾಗಿದೆ.
ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ವಕೀಲರು, ದಾವೆದಾರರು, ಸರ್ಕಾರಿ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವುದಕ್ಕಾಗಿ ಈ ವ್ಯವಸ್ಥೆ ಪರಿಚಯಿಸಲಾಗಿದೆ. ಬಳಕೆದಾರಸ್ನೇಹಿ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಇ-ಕೋರ್ಟ್ಸ್ ಯೋಜನೆಯ ಮೂರನೇ ಹಂತದ ಭಾಗವಾಗಿ ಪರಿಚಯಿಸಲಾಗಿದೆ. ಹೈಕೋರ್ಟ್ನ ಸಮಗ್ರ ಮತ್ತು ವರದಿ ಮಾಡಬಹುದಾದ ಕೇಸ್ ಲಾಗಳನ್ನು ಇದು ಒಳಗೊಂಡಿದೆ. ಹೈಕೋರ್ಟ್ ನೆರವಿನೊಂದಿಗೆ ಕರ್ನಾಟಕ ಕಾನೂನು ವರದಿಗಾರಿಕೆ ಒಕ್ಕೂಟ ಹೊರತಂದಿದೆ.