ಕರ್ನಾಟಕ

karnataka

ETV Bharat / state

ಹೈಕೋರ್ಟ್ ವಕೀಲೆ ಚೈತ್ರಾ ಸಾವು ಪ್ರಕರಣ: ಸಿಸಿಬಿಗೆ ತನಿಖೆ ವರ್ಗಾವಣೆ - Lawyer Chaitra Death Case - LAWYER CHAITRA DEATH CASE

ಕೆಎಎಸ್ ಅಧಿಕಾರಿ ಪತ್ನಿ, ವಕೀಲೆ ಚೈತ್ರಾ ಗೌಡ ಸಾವು ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆಯಾಗಿದೆ.

ccb investigation
ಸಿಸಿಬಿ ಕಚೇರಿ (ETV Bharat)

By ETV Bharat Karnataka Team

Published : May 30, 2024, 10:44 AM IST

ಬೆಂಗಳೂರು: ಹೈಕೋರ್ಟ್ ವಕೀಲರು ಹಾಗೂ ಕೆಎಎಸ್ ಅಧಿಕಾರಿ ಪತ್ನಿ ಚೈತ್ರಾ ಗೌಡ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿದೆ. ಮೇ 11ರಂದು ಸಂಜಯನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.

ಕೆಐಡಿಬಿ ಅಧಿಕಾರಿ ಶಿವಕುಮಾರ್ ಅವರ ಪತ್ನಿಯಾಗಿದ್ದ ಚೈತ್ರಾ ಗೌಡ ಹೈಕೋರ್ಟ್ ವಕೀಲರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಚೈತ್ರಾ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದವು. ಸೂಕ್ತ ತನಿಖೆಗೆ ಆಗ್ರಹಿಸಿ ಬೆಂಗಳೂರು ನಗರ ವಕೀಲರ ಸಂಘದಿಂದ ಕೂಡ ಪೊಲೀಸ್ ಕಮಿಷನರ್ ಹಾಗೂ ಉತ್ತರ ವಿಭಾಗದ ಡಿಸಿಪಿಗೆ ಪತ್ರ ಬರೆಯಲಾಗಿತ್ತು. ಚೈತ್ರಾ ಅತ್ಯಂತ ದಿಟ್ಟ ಹಾಗೂ ಧೈರ್ಯವಂತೆ ಆಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ವಕೀಲರ ಸಂಘ ತಿಳಿಸಿತ್ತು.

ಚೈತ್ರಾ ಮನೆಯಲ್ಲಿ ಸಿಕ್ಕ ಡೆತ್​ನೋಟ್​ನಲ್ಲಿ ಮೂರು ತಿಂಗಳ ಹಳೇ ದಿನಾಂಕ ನಮೂದಿಸಲಾಗಿದೆ. ಖಿನ್ನತೆಗೆ ಒಳಗಾಗಿರುವುದಾಗಿ, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ ಎಂದು ತಿಳಿದುಬಂದಿತ್ತು.

ಸಿಸಿಬಿ ತನಿಖೆ:ಇತ್ತ ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಚೈತ್ರಾ ಜೊತೆಗೆ ಮಾತನಾಡಿರುವ ವ್ಯಕ್ತಿಗಳ ಕರೆ ಲಿಸ್ಟ್​ ಮತ್ತು ಹಣಕಾಸು ವ್ಯವಹಾರದ ಪರಿಶೀಲನೆಗೆ ಮುಂದಾಗಿದೆ. ಅಲ್ಲದೆ, ಜೊತೆಗೆ ಚೈತ್ರಾ ಸಾವಿನ ಹಿಂದಿನ 15 ದಿನಗಳ ಸಿಸಿಟಿವಿ ಚೆಕ್​ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ಬಳಿಕ ಸಾವಿನ ಹಿಂದಿನ ರಹಸ್ಯ ಭೇದಿಸಲು ಸಿಸಿಬಿ ತಯಾರಿ ನಡೆಸಿದೆ.

ಸಂಜಯನಗರ ಪೊಲೀಸರ ತನಿಖೆ ಪ್ರಕಾರ, ಮಾನಸಿಕ ಖಿನ್ನತೆಯಿಂದಾಗಿ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಹಿಂದೆ ಯಾರ ಕೈವಾಡ ಇಲ್ಲದಿರುವುದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅವರೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವುದಾಗಿ ಪೊಲೀಸರು ದೃಢಪಡಿಸಿಕೊಂಡಿದ್ದರು. ಪತ್ತೆಯಾಗಿದ್ದ ಡೆತ್​​ನೋಟ್ ಬಗ್ಗೆ ತನಿಖೆ ನಡೆಸಿದಾಗ ಅವರೇ ಬರೆದಿರುವುದು ಖಚಿತವಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಆರಂಭದಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪತಿ ಶಿವಕುಮಾರ್ ಅವ​​ರನ್ನು ಕರೆದು ವಿಚಾರಣೆ‌‌ ನಡೆಸಿದ್ದರು. ಪತ್ನಿಯೊಂದಿಗೆ ಯಾವುದೇ ವೈಷ್ಯಮ್ಯ ಇಲ್ಲ, ನಾವು ಅನ್ಯೋನ್ಯವಾಗಿದ್ದೆವು. ಅಲ್ಲದೆ, ವೃತ್ತಿ ವೈಷಮ್ಯ ಹಾಗೂ ಹಣಕಾಸಿನ ವಿಚಾರದಲ್ಲಿಯೂ ಯಾವುದೇ ಕಿರಿಕಿರಿ ಇರಲಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದರು‌‌ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದೆಡೆ, ಮೃತಳ ಸಹೋದರ ಹಾಗೂ‌ ಕುಟುಂಬಸ್ಥರನ್ನು ಕರೆದು ವಿಚಾರಣೆ ನಡೆಸಿದಾಗ ಆಸ್ತಿ ವಿಚಾರವಾಗಿ ಚೈತ್ರಾರೊಂದಿಗೆ ತಮಗೆ ಮನಸ್ತಾಪವಾಗಿತ್ತು‌.‌ ಇದೇ ವಿಚಾರವಾಗಿ ಕಳೆದೊಂದು ವರ್ಷದಿಂದ ವೈಮನಸ್ಸು ಮೂಡಿತ್ತು ಎಂದು ಹೇಳಿಕೆ‌ ನೀಡಿದ್ದರು‌.

ಮೂರು ತಿಂಗಳ ಹಿಂದೆಯಷ್ಟೇ ಕುಟುಂಬಸ್ಥರೊಂದಿಗೆ ಮಾತನಾಡುವಾಗ ಚೈತ್ರಾ ಸಾಯುವ ಮಾತು ಹೇಳಿದ್ದರು ಎನ್ನಲಾಗಿದ್ದು, ಕುಟುಂಬಸ್ಥರು ಇದನ್ನು ಲಘುವಾಗಿ ಪರಿಗಣಿಸಿದ್ದರು. ಹೀಗಾಗಿ, ಅವರು ಮೂರು ತಿಂಗಳ ಹಿಂದೆಯೇ ಡೆತ್​​ನೋಟ್ ಬರೆದಿದ್ದರು. ಆಸ್ತಿ ವಿಚಾರವಾಗಿ ಮನಸ್ತಾಪ ಹಾಗೂ ಖಿನ್ನತೆಯಿಂದಾಗಿ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ತನಿಖೆಯಿಂದ ಗೊತ್ತಾಗಿದೆ. ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪ್ರೀತ್ಸಿದ್ದಕ್ಕೆ ಬಲಿಯಾದವು ಮೂರು ಜೀವಗಳು; ತ್ರಿವಳಿ ಕೊಲೆ ಪ್ರಕರಣ ಭೇದಿಸಿದ ಕೊಪ್ಪಳ ಪೊಲೀಸ್​ - KOPPAL MURDER CASE

ABOUT THE AUTHOR

...view details