ಬೆಂಗಳೂರು:ಅಶ್ಲೀಲ ವಿಡಿಯೋಸಂತ್ರಸ್ತೆಯ ಅಪಹರಣ ಆರೋಪ ಪ್ರಕರಣ ಸಂಬಂಧ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿರುವ ಅರ್ಜಿ ಸಂಬಂಧ ಹೆಚ್.ಡಿ. ರೇವಣ್ಣ ಅವರಿಗೆ ಹೈಕೋರ್ಟ್ ಇಂದು ನೋಟಿಸ್ ಜಾರಿ ಮಾಡಿದೆ. ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ರೇವಣ್ಣಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರು ಮಾಡಿರುವ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 364(ಎ) ಅನ್ವಯವಾಗುವುದಿಲ್ಲ ಎಂದು ವಿಚಾರಣಾ ನ್ಯಾಯಾಲಯ ಅಭಿಪ್ರಾಯಪಟ್ಟು ಜಾಮೀನು ಮಂಜೂರು ಮಾಡಿದೆ. ಆದರೆ, ಪ್ರಕರಣದಲ್ಲಿ ಸೆಕ್ಷನ್ 364 (ಎ) ಅನ್ವಯವಾಗುತ್ತದೆ. ಆದ್ದರಿಂದ ಜಾಮೀನು ರದ್ದುಪಡಿಸಬೇಕು. ಅಲ್ಲದೆ, ಸಂತ್ರಸ್ತೆಯನ್ನು ದೂರು ನೀಡದಂತೆ ನಿಬಂಧಿಸಲಾಗುತ್ತಿದೆ ಎಂದು ಸರ್ಕಾರದ ಪರ ವಿಶೇಷ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್ ಮಂಡಿಸಿದ ವಾದ ಆಲಿಸಿದ ಪೀಠ, ಆಕ್ಷೇಪಣೆ ಸಲ್ಲಿಸುವಂತೆ ರೇವಣ್ಣಗೆ ನೋಟಿಸ್ ಜಾರಿಗೊಳಿಸಿದೆ.
ಇದನ್ನೂ ಓದಿ:ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್, ವಿಮಾನ ನಿಲ್ದಾಣದಲ್ಲಿ ಬಂಧಿಸಿದ SIT - SIT Arrests Prajwal Revanna