ಕರ್ನಾಟಕ

karnataka

ETV Bharat / state

ಆಸ್ತಿ ತೆರಿಗೆ ಬಾಕಿ ಪಾವತಿಸುವ ಭರವಸೆ: ಇಂದಿನಿಂದ ಬೆಂಗಳೂರಿನ ಮಂತ್ರಿ ಮಾಲ್ ಓಪನ್ - Mantri Mall - MANTRI MALL

ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡ ಕಾರಣ ಮಂತ್ರಿ ಮಾಲ್​ಗೆ ಬಿಬಿಎಂಪಿ ಮೇ 10ರಂದು ಬೀಗ ಜಡಿದಿತ್ತು.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : May 17, 2024, 7:02 AM IST

ಬೆಂಗಳೂರು:ನಗರದ ಮಂತ್ರಿಮಾಲ್​ ಬಾಕಿ ಉಳಿಸಿಕೊಂಡಿದ್ದ ₹41 ಕೋಟಿ ಆಸ್ತಿ ತೆರಿಗೆಯ ಪೈಕಿ ₹20 ಕೋಟಿಯನ್ನು ಜುಲೈ 31ರೊಳಗೆ ಪಾವತಿಸುವುದಾಗಿ ಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿದೆ. ಹೀಗಾಗಿ, ಶುಕ್ರವಾರ ಬೆಳಗ್ಗೆ (ಇಂದಿನಿಂದ) 10 ಗಂಟೆಯಿಂದ ಮಾಲ್‌ಗೆ ಹಾಕಲಾಗಿರುವ ಬೀಗ ತೆಗೆಯುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ)ಗೆ ಹೈಕೋರ್ಟ್ ಸೂಚನೆ ನೀಡಿದೆ.

ಮಾಲ್​ಗೆ ಬಿಬಿಎಂಪಿ ಬೀಗ ಹಾಕಿರುವ ಕ್ರಮ ಪ್ರಶ್ನಿಸಿ ಮಾಲ್‌ನ ಮಾಲೀಕರಾಗಿರುವ ಮೆರ್ಸೆಸ್ ಅಭಿಷೇಕ್ ಪ್ರಾಪ್ಬಿಲ್ಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ರಜಾಕಾಲದ ಪೀಠ ನಡೆಸಿತು.

ಈ ವೇಳೆ ಅರ್ಜಿದಾರ ಕಂಪನಿಯ ಹಣಕಾಸು ಅಧಿಕಾರಿ ಪ್ರಮಾಣಪತ್ರ ಸಲ್ಲಿಸಿ, 2024ರ ಜು.31ರೊಳಗೆ 20 ಕೋಟಿ ಹಣವನ್ನು ಬಿಬಿಎಂಪಿಗೆ ಪಾವತಿಸಲಾಗುವುದು ಎಂದು ಭರವಸೆ ನೀಡಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿದಾರ ಕಂಪನಿಯು 2024ರ ಜೂ.1ರೊಳಗೆ 3.5 ಕೋಟಿ ರೂ. ಆಸ್ತಿ ತೆರಿಗೆಯನ್ನು ಬಿಬಿಎಂಪಿಗೆ ಪಾವತಿಸಬೇಕು. ಶುಕ್ರವಾರ (ಮೇ 17) ಬೆಳಗ್ಗೆ 10 ಗಂಟೆಯಿಂದ ಮಾಲ್‌ಗೆ ಹಾಕಿರುವ ಬೀಗವನ್ನು ಬಿಬಿಎಂಪಿ ತೆಗೆಯಬೇಕು ಎಂದು ಸೂಚಿಸಿ ಷರತ್ತುಬದ್ಧ ಮಧ್ಯಂತರ ಆದೇಶ ಮಾಡಿತು.

ಇದಕ್ಕೂ ಮುನ್ನ ನಡೆದ ವಿಚಾರಣೆಯಲ್ಲಿ, ಕಂಪನಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಹಾಜರಾಗಿ, ಮಂತ್ರಿ ಮಾಲ್‌ನಲ್ಲಿ 250ಕ್ಕೂ ಅಧಿಕ ಮಳಿಗೆ ಹಾಗೂ ವ್ಯಾಪಾರ ಕೇಂದ್ರಗಳು ಮತ್ತು ಹೋಟೆಲ್‌ಗಳಿವೆ. ಸುಮಾರು 2,500 ಉದ್ಯೋಗಿಗಳಿದ್ದಾರೆ. 2024ರ ಮೇ 10ರಿಂದ ಕಾನೂನು ಬಾಹಿರವಾಗಿ ಬಿಬಿಎಂಪಿ, ಮಾಲ್‌ಗೆ ಬೀಗಹಾಕಿದೆ. ಇದರಿಂದ ಉದ್ಯೋಗಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ನಿತ್ಯ ಅಂದಾಜು 7ರಿಂದ 8 ಕೋಟಿ ರೂ. ವ್ಯಾಪಾರ ನಷ್ಟವಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೆ, ಮಾಲ್ ಮೇಲೆ ಬ್ಯಾಂಕ್ ಸಾಲದ ಮರು ಪಾವತಿಯ ಹೊಣೆಯಿದೆ. ಬೀಗ ಹಾಕಿರುವುದರಿಂದ ಗಂಭೀರ ಸಮಸ್ಯೆ ಎದುರಾಗುತ್ತಿದೆ. ಬಿಬಿಎಂಪಿ ಐದನೇ ಬಾರಿಗೆ ಮಾಲ್​ ಮುಚ್ಚಿಸಿದೆ. ಈ ನಡೆ ಮಳಿಗೆಗಳ ಬಾಡಿಗೆದಾರರು ಅರ್ಜಿದಾರರ ವಿರುದ್ಧ ಮೊಕದ್ದಮೆ ಹೂಡಲು ಮತ್ತು ಬಾಡಿಗೆ ಪಾವತಿಸಲು ನಿರಾಕರಿಸುವುದನ್ನು ಪ್ರೇರೇಪಿಸುತ್ತದೆ. ಅಕ್ಷಯ ತೃತೀಯ ದಿನದಿಂದ ಮಾಲ್ ಒಳಗಿರುವ ಚಿನ್ನಾಭರಣ ಮಳಿಗೆಗಳ ವ್ಯಾಪಾರಕ್ಕೆ ಅಡಚಣೆ ಉಂಟಾಗಿ, ದೊಡ್ಡ ಮೊತ್ತದ ನಷ್ಟ ಉಂಟಾಗಿದೆ ಎಂದು ವಿವರಿಸಿದರು.

ಬಿಬಿಎಂಪಿ ಪರ ವಕೀಲರು, 2018ರ ನಂತರದಿಂದ ಮಾಲ್​ಗೆ ಸಂಬಂಧಿಸಿದಂತೆ ಅರ್ಜಿದಾರರು ಒಟ್ಟು 41 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಪ್ರಕರಣದ ಹಿನ್ನೆಲೆ: ಒಟ್ಟು 41 ಕೋಟಿ ರೂ. ಆಸ್ತಿ ತೆರಿಗೆ ಪಾವತಿಸಿಲ್ಲ ಎಂದು ಆರೋಪಿಸಿ ಬಿಬಿಎಂಪಿ ಮೇ 10ರಂದು ಮಂತ್ರಿ ಮಾಲ್‌ಗೆ ಬೀಗ ಹಾಕಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಕಂಪನಿ ಸಿಟಿ ಸಿವಿಲ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿದಾರರು ಬಾಕಿಯಿರುವ ಪೈಕಿ ಶೇ.50ರಷ್ಟು ತೆರಿಗೆ ಹಣವನ್ನು 10 ದಿನಗಳಲ್ಲಿ ಬಿಬಿಎಂಪಿಗೆ ಪಾವತಿಸಬೇಕು. ಹಣ ಪಾವತಿಸಿದ ನಂತರ ಬಿಬಿಎಂಪಿಯು ಬೀಗ ತೆರೆದು ಮಾಲ್​ನಲ್ಲಿ ವ್ಯಾಪಾರ ವಹಿವಾಟು ನಡೆಸಲು ಹಾಗೂ ಮಾಲ್​ ಒಳಗೆ ಪ್ರವೇಶಿಸಲು ಹಾಗೂ ಹೊರಗೆ ನಿರ್ಗಮಿಸಲು ಅರ್ಜಿದಾರರಿಗೆ, ಮಳಿಗೆದಾರರಿಗೆ ಮತ್ತು ಉದ್ಯೋಗಿಗಳಿಗೆ ಬಿಬಿಎಂಪಿ ಅನುಮತಿ ನೀಡಬೇಕು ಎಂದು ಬುಧವಾರ (ಮೇ 15ರಂದು) ನಿರ್ದೇಶಿಸಿತ್ತು. ಅರ್ಜಿದಾರ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.

ABOUT THE AUTHOR

...view details