ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ನೀಡಿದ್ದ ಸಮ್ಮತ್ತಿ ಹಿಂಪಡೆದಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಅಂತಿಮ ತೀರ್ಪು ಗುರುವಾರ ಪ್ರಕಟಗೊಳ್ಳಲಿದೆ.
ಪ್ರಕರಣ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಬಿಐ ಹೈಕೋರ್ಟ್ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ ಅಡಿಗ ಅವರಿದ್ದ ನ್ಯಾಯಪೀಠ ಗುರುವಾರ ಸಂಜೆ 4.30ಕ್ಕೆ ತೀರ್ಪು ಪ್ರಕಟಿಸಲಿದೆ.
ಪ್ರಕರಣದ ಹಿನ್ನೆಲೆ:ಡಿ.ಕೆ. ಶಿವಕುಮಾರ್ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ. ದೆಹಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಡಿಕೆಶಿಗೆ ಸೇರಿದ ಆಸ್ತಿಗಳಲ್ಲಿ 2017ರ ಆಗಸ್ಟ್ 2ರಂದು ಆದಾಯ ತೆರಿಗೆ ಇಲಾಖೆ ಶೋಧ ನಡೆಸಿತ್ತು. ಈ ವೇಳೆ ಭಾರಿ ಮೊತ್ತದ ಹಣ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ನಂತರ ಜಾರಿ ನಿರ್ದೇಶನಾಲಯ ಡಿಕಿಶಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕರಣ ದಾಖಲಿಸಿತ್ತು. ಇದನ್ನು ಆಧರಿಸಿ 2019ರ ಸೆಪ್ಟೆಂಬರ್ 3ರಂದು ಶಿವಕುಮಾರ್ ಅವರನ್ನು ಬಂಧಿಸಲಾಗಿತ್ತು. 2019ರ ಸೆಪ್ಟೆಂಬರ್ 9ರಂದು ಜಾರಿ ನಿರ್ದೇಶನಾಲಯದ ಪತ್ರ ಆಧರಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರವು ಅನುಮತಿ ನೀಡಿತ್ತು.
ಇದನ್ನೂ ಓದಿ:ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ; ರಾಜ್ಯಪಾಲರ ಕ್ರಮ ಪ್ರಶ್ನಿಸಿರುವ ಅರ್ಜಿ ನಾಳೆ ವಿಚಾರಣೆ - MUDA Case