ಬೆಂಗಳೂರು:ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಮತ್ತು ಉದ್ಯೋಗಿಗಳ ಪಿಂಚಣಿ (ಇಪಿ) ಯೋಜನೆಯನ್ನು ಭಾರತದಲ್ಲಿರುವ ವಿದೇಶಿ ಕಾರ್ಮಿಕರಿಗೆ ವಿಸ್ತರಿಸಿರುವ ಕೇಂದ್ರ ಸರಕಾರದ ಕ್ರಮವನ್ನು 'ಅಸಾಂವಿಧಾನಿಕ' ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
2008ರಲ್ಲಿ ವಿದೇಶಿ ಕಾರ್ಮಿಕರಿಗೆ ಇಎಸ್ಐ ಮತ್ತು ಇಪಿ ಜಾರಿ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸ್ಟೋನ್ ಹಿಲ್ ಎಜುಕೇಷನ್ ಫೌಂಡೇಶನ್ ಹಾಗು ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖ ಅವರಿದ್ದ ನ್ಯಾಯಪೀಠ, ವಿದೇಶಿ ನೌಕರರಿಗೆ ಇಎಸ್ಐ ಮತ್ತು ಇಪಿ ಜಾರಿಗೆ ತಂದಿರುವ ಕ್ರಮ ಅಸಾಂವಿಧಾನಿಕ ಮತ್ತು ಸ್ವೇಚ್ಛೆಯಿಂದ ಕೂಡಿದ್ದು, ಇದನ್ನು ರದ್ದುಗೊಳಿಸುವುದಾಗಿ ಹೇಳಿತು.
ಅಲ್ಲದೆ ಕೇಂದ್ರ ಸರ್ಕಾರಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯಿದೆಯು (ಇಪಿಎಫ್ ಮತ್ತು ಎಂಪಿ ಕಾಯಿದೆ) ಯೋಜನೆಯಲ್ಲಿ ಮಾರ್ಪಾಡು ಮಾಡಲು ಅವಕಾಶ ಕಲ್ಪಿಸುತ್ತದೆ. ಅಧಿಕಾರವನ್ನು ಶಾಸನದ ಉದ್ದೇಶಗಳನ್ನು ಪೂರೈಸಲು ಮಾತ್ರ ಬಳಸಬೇಕು. ಇಪಿಎಫ್ ಮತ್ತು ಎಂಪಿ ಕಾಯಿದೆಯನ್ನು ಕಡಿಮೆ ವೇತನ ಪಡೆಯುವವರಿಗೆ ನಿವೃತ್ತಿಯ ಬಳಿಕ ಅನುಕೂಲವಾಗಿಸಲು ರೂಪಿಸಲಾಗಿದೆಯೇ ವಿನಾ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ಪಡೆಯುವವರಿಗಾಗಿ ರೂಪಿಸಲಾಗಿಲ್ಲ.
ಇಪಿಎಫ್ ಮತ್ತು ಎಂಪಿ ಕಾಯಿದೆಯು ಕಟ್ಟುನಿಟ್ಟಾದ ನಿಬಂಧನೆಗಳನ್ನು ಹೊಂದಿದೆ. ಅದರ ಅಡಿಯಲ್ಲಿ ಇಪಿಎಫ್ ಸಂಸ್ಥೆ ಅಥವಾ ಇಪಿಎಫ್ಒನ ಉದ್ಯೋಗಿಗಳು ಸರಿಯಾಗಿ ಅನುಪಾಲನೆ ಮಾಡದಿದ್ದಲ್ಲಿ ಭಾರೂ ದಂಡ ವಿಧಿಸಬಹುದಾಗಿದೆ. ನಿರ್ದಿಷ್ಟ ಉದ್ಯೋಗಿಗಳಿಗೆ ರೂಪಿಸಲಾಗಿರುವ ಯೋಜನೆಯನ್ನು ಭಾರೀ ಹಣ ಸಂಪಾದಿಸುವ ಶ್ರೀಮಂತ ವಿದೇಶಿ ಉದ್ಯೋಗಿಗಳ ಅವಶ್ಯಕತೆ ಪೂರೈಸಲು ಅನುಮತಿಸಲಾಗದು ಎಂದು ನ್ಯಾಯಾಲಯ ಹೇಳಿದೆ.
ಭಾರತದಿಂದ ಹೊರ ದೇಶಕ್ಕೆ ಸೇವೆಯ ಮೇಲೆ ನಿಯೋಜಿಸುವ ಉದ್ಯೋಗಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕಾಯಿದೆ ರೂಪಿಸಲಾಗಿದೆ. ಆ ದೇಶದಲ್ಲಿ ಸಾಮಾಜಿಕ ಭದ್ರತೆ ಉಂಟಾಗದಿರಲಿ ಎಂದು ಕಾಯಿದೆ ರೂಪಿಸಲಾಗಿದೆ. ಭಾರತದ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಬೇರೆ ದೇಶದ ಪ್ರಜೆಗಳು ಭಾರತದಲ್ಲಿ ಕೆಲಸ ಮಾಡುವಾಗ ಅವರನ್ನು ಅನ್ಯೋನ್ಯತೆಯಿಂದ ಕಾಣಲಾಗುವುದು ಎಂದು ಆ ದೇಶಗಳಲ್ಲಿ ಪ್ರೇರಣೆ ಉಂಟುಮಾಡುವ ಉದ್ದೇಶವೂ ಇದೆ. ಆದಾಗ್ಯೂ, ಇಪಿಎಫ್ ಮತ್ತು ಎಂಪಿ ಕಾಯಿದೆ ಅಡಿ ಮಾಸಿಕ 15,000 ರೂಪಾಯಿ ಪಡೆಯುವವರು ಇಪಿಎಫ್ ಯೋಜನೆಯ ಸದಸ್ಯತ್ವ ಪಡೆಯಬಹುದು. ಆದರೆ, ವಿದೇಶಿ ಕಾರ್ಮಿಕರಿಗೆ ವೇತನ ಮಿತಿ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣದ ಹಿನ್ನೆಲೆ: 2008ರಲ್ಲಿ ಅಂತಾರಾಷ್ಟ್ರೀಯ ಉದ್ಯೋಗಿಗಳಿಗೆ ಇಪಿಎಫ್ ಯೋಜನೆಯ ಪ್ಯಾರಾ 83 ಮತ್ತು ಇಪಿ ಯೋಜನೆಯ ಪ್ಯಾರಾ 43ಎ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಭಾರತದಲ್ಲಿ ವಿದೇಶಿ ಉದ್ಯೋಗಿಗಳು ನಿರ್ದಿಷ್ಟ ಕಾಲಾವಧಿಗೆ ಮಾತ್ರ ಕಾರ್ಯನಿರ್ವಹಿಸಲಿದ್ದು, ಅವರಿಗೆ ಭವಿಷ್ಯ ನಿಧಿಗೆ ಹಣ ಸಂದಾಯ ಮಾಡುವುದರಿಂದ ತಮಗೆ ಹಾನಿಯಾಗುತ್ತದೆ. ವಿದೇಶಿ ಕೆಲಸಗಾರರು ಪ್ರತ್ಯೇಕ ವರ್ಗಕ್ಕೆ ಸೇರುತ್ತಾರೆ ಎಂದು ಅರ್ಜಿದಾರ ಸಂಸ್ಥೆಗಳು ಮತ್ತು ಉದ್ಯೋಗಿಗಳು ಆಕ್ಷೇಪಿಸಿದ್ದರು.
ಇದನ್ನೂ ಓದಿ:ಬಿಡಿಎ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ, ಆಸ್ತಿ ತೆರಿಗೆ ಪಾವತಿಸಲು ಜನರ ಪರದಾಟ; ನಿತ್ಯ ಕಚೇರಿಗಳಿಗೆ ಅಲೆದಾಟ - BDA Property Tax