ಹುಬ್ಬಳ್ಳಿ:ವಿಪರೀತಮಳೆಯಿಂದಾಗಿ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆ ಎಲ್ಲರ ಮನೆಗೆ ಬೆಳಕು ನೀಡುವ ಇಲಾಖೆಯೇ ದೊಡ್ಡ ಪ್ರಮಾಣದ ನಷ್ಟ ಅನುಭವಿಸಿದೆ. ಪ್ರಸಕ್ತ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆ, ಗಾಳಿ ಮತ್ತು ಪ್ರವಾಹದಿಂದಾಗಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಗೆ 47.71 ಕೋಟಿ ರೂಪಾಯಿ ನಷ್ಟವಾಗಿದೆ.
ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಾದ ಧಾರವಾಡ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಹಾವೇರಿಯಲ್ಲಿ ಭಾರಿ ಮಳೆ, ಗಾಳಿಗೆ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕಗಳು (ಟಿಸಿ) ಹಾಗೂ ಲೈನ್‌ಗಳು (ತಂತಿ) ಹಾಳಾಗಿವೆ.
ಮುಂಗಾರು, ಹಿಂಗಾರು ಮಳೆಯಿಂದ ವಿದ್ಯುತ್ ಸರಬರಾಜು ಕಂಪನಿಗೆ ಭಾರಿ ನಷ್ಟ (ETV Bharat) ಹೆಸ್ಕಾಂ ವ್ಯಾಪ್ತಿಯ ಧಾರವಾಡ ಜಿಲ್ಲೆಯಲ್ಲಿ 752 ಕಂಬಗಳು ಧರೆಗುರುಳಿವೆ. ಗದಗ-698, ಹಾವೇರಿ-1,933, ಉತ್ತರ ಕನ್ನಡ-11,880, ಬೆಳಗಾವಿ-3,592, ವಿಜಯಪುರ- 2,126, ಬಾಗಲಕೋಟೆ- 2,695 ಕಂಬಗಳು ನೆಲಕ್ಕುರುಳಿವೆ.
ಧಾರವಾಡ-58, ಗದಗ-2, ಹಾವೇರಿ-52, ಉತ್ತರ ಕನ್ನಡ-1,023, ಬೆಳಗಾವಿ-538, ವಿಜಯಪುರ-140, ಬಾಗಲಕೋಟೆ- 439 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ.
738 ಕಿಲೋಮೀಟರ್ ವಿದ್ಯುತ್ ಲೈನ್ ಮಳೆಯಿಂದಲೇ ಹಾಳಾಗಿದೆ. ವಿದ್ಯುತ್ ಕಂಬ ಬಿದ್ದಿರುವುದರಿಂದ 31 ಕೋಟಿ ರೂ, ಟಿಸಿಗಳು ಕೆಟ್ಟಿರುವುದರಿಂದ 12 ಕೋಟಿ ರೂ, ಲೈನ್‌ಗಳಲ್ಲಿನ ತಂತಿ ಹಾಳಾಗಿರುವುದರಿಂದ 3.95 ಕೋಟಿ ರೂ. ಹಾಗೂ ಇನ್ನಿತರ ಹಾನಿ ಸೇರಿ ಒಟ್ಟು 47.71 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಉತ್ತರ ಕನ್ನಡದಲ್ಲಿ ಹೆಚ್ಚು ನಷ್ಟ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ, 11,880 ವಿದ್ಯುತ್ ಕಂಬಗಳು ಬಿದ್ದಿದ್ದು, 1,023 ಟಿಸಿಗಳು ಹಾನಿಗೊಂಡಿವೆ. 530 ಕಿ.ಮೀನಷ್ಟು ವಿದ್ಯುತ್ ತಂತಿ (ಲೈನ್) ಹಾಳಾಗಿದೆ. ಗದಗ ಜಿಲ್ಲೆಯಲ್ಲಿ 698 ಕಂಬಗಳು ಬಿದ್ದಿದ್ದು, 2 ಟಿಸಿಗಳು ಹಾನಿಯಾಗಿವೆ.
ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್. 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಲಿ, ''ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲೂ 47.71 ಕೋಟಿ ಹಾನಿಯಾಗಿದ್ದು, ಮುರಿದುಬಿದ್ದ ಕಂಬ ಹಾಗೂ ಟಿಸಿಗಳನ್ನು ತೆರವುಗೊಳಿಸಿ ಹೊಸ ಕಂಬ ಹಾಗೂ ಟಿಸಿಗಳನ್ನು ಅಳವಡಿಸಲಾಗಿದೆ. ಬಾಕಿ ಇರುವ ಕಡೆ ಆದಷ್ಟು ಕಾಮಗಾರಿ ಪೂರ್ಣಗೊಳಿಸಲಾಗುವುದು. ಎನ್ಡಿಆರ್ಎಫ್ ಅನ್ವಯ ಸ್ವಲ್ಪ ಪರಿಹಾರಧನ ಬರಲಿದೆ. ಉಳಿದಂತೆ ಹೆಸ್ಕಾಂ ಭರಿಸಲಿದೆ'' ಎಂದರು.
ಇದನ್ನೂ ಓದಿ:ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್: ಅ.1ರಿಂದಲೇ ನಿಯಮ ಜಾರಿ - Hescom Rule