ಮನೆ ಮೇಲೆ ಗುಡ್ಡ ಕುಸಿತ (ETV Bharat) ಕಾರವಾರ (ಉತ್ತರ ಕನ್ನಡ):ಭಾರಿ ಮಳೆಗೆಮನೆ ಪಕ್ಕದ ಗುಡ್ಡವೊಂದು ಕುಸಿದು, ಬಂಡೆಗಲ್ಲುಗಳು ಉರುಳಿಬಿದ್ದ ಘಟನೆ ನಗರದ ಹಬ್ಬುವಾಡ ಬಳಿ ಫಿಶರೀಸ್ ಕಾಲೋನಿ ಸಮೀಪ ಸೋಮವಾರ ಮುಂಜಾನೆ ಸಂಭವಿಸಿದೆ. ಮಾಜಿ ಯೋಧ ವಿನೋದ್ ಉಳ್ವೇಕರ್ ಎಂಬುವರು ಫಿಶರೀಸ್ ಕಾಲೋನಿ ಬಳಿ ಮನೆ ಖರೀದಿಸಿದ್ದರು. ಈ ಮನೆಗೆ ಬೃಹತ್ ಕಲ್ಲುಗಳು ಉರುಳಿದ್ದು, ಗೋಡೆ ಹಾಗೂ ವಸ್ತುಗಳಿಗೆ ಹಾನಿಯಾಗಿದೆ.
ಉತ್ತರ ಕನ್ನಡಜಿಲ್ಲಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಕಾರವಾರದಲ್ಲಿ ಭಾನುವಾರದಿಂದಲೂ ವರ್ಷಧಾರೆ ಮುಂದುವರೆದಿದೆ. ಪರಿಣಾಮ ಇಂದು ಮುಂಜಾನೆ ಸುಮಾರು 5 ಗಂಟೆ ವೇಳೆ ಮನೆಯವರಿಗೆ ಜೋರಾದ ಶಬ್ದ ಕೇಳಿಸಿದೆ. ಅಕ್ಕಪಕ್ಕದ ಮನೆಯವರಿಗೂ ಗೊತ್ತಾಗಿದ್ದು, ವಿನೋದ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಕೊನೆಗೆ ಎದ್ದುಬಂದು ನೋಡಿದಾಗ ಗುಡ್ಡ ಸಹಿತ ಬೃಹತ್ ಬಂಡೆ ಉರುಳಿದ್ದು, ಮನೆಯ ಸ್ಟೋರೇಜ್ ಕೊಠಡಿಗೆ ಹಾನಿಯಾಗಿರುವುದು ಕಂಡು ಬಂದಿದೆ.
ಅದೃಷ್ಟವಶಾತ್ ಹಾನಿಗೊಳಗಾದ ಕೊಠಡಿಯಲ್ಲಿ ಯಾರೂ ಇರಲ್ಲಿಲ್ಲ. ಅಲ್ಲದೇ, ಗೋಡೆಗೂ ಬಂಡೆಗಲ್ಲು ತಗುಲಿ ಹಾನಿಯಾಗಿದೆ. ಜೊತೆಗೆ, ಇನ್ನಷ್ಟು ಕಲ್ಲು ಬಂಡೆಗಳು, ಮರಗಳು ಜಾರಿ ಬಂದು ಮನೆ ಬಳಿ ನಿಂತಿವೆ. ಯಾವುದೇ ಕ್ಷಣದಲ್ಲಿ ಮರ ಹಾಗೂ ಗುಡ್ಡ ಕುಸಿಯುವ ಆತಂಕ ಮನೆಯವರಿಗೆ ಎದುರಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೆ ಮಾಲೀಕ ವಿನೋದ್, ''ಗುಡ್ಡ ಕುಸಿತವಾಗುವ ಬಗ್ಗೆ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಜಾಗದ ಮಾಲೀಕರಿಗೆ ಮೊದಲೇ ತಿಳಿಸಿ, ತಡೆಗೋಡೆ ನಿರ್ಮಿಸುವಂತೆಯೂ ಮನವಿ ಮಾಡಿದ್ದೇವೆ. ಆದರೆ, ಇದೀಗ ಅನಾಹುತವಾಗಿದ್ದು, ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಮನೆಯಲ್ಲಿ ವಾಸ ಮಾಡುವುದಕ್ಕೂ ಆತಂಕವಾಗುತ್ತಿದೆ. ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಲಕ್ಷಾಂತರ ರೂ. ಹಾನಿಯಾಗಿದೆ. ಮತ್ತೆ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಪಟ್ಟ ಜಾಗದ ಮಾಲೀಕರಿಗೆ ಸೂಚನೆ ನೀಡಬೇಕು'' ಎಂದು ಆಗ್ರಹಿಸಿದ್ದಾರೆ.
ಹೊನ್ನಾವರದಲ್ಲಿ ಗುಡ್ಡ ಕುಸಿತ (ETV Bharat) ಹೊನ್ನಾವರದಲ್ಲಿ ಗುಡ್ಡ ಕುಸಿದು ಹೆದ್ದಾರಿ ಸಂಚಾರ ಅಸ್ತವ್ಯಸ್ತ: ಮತ್ತೊಂದೆಡೆ, ಹೊನ್ನಾವರ - ಬೆಂಗಳೂರು ಹೆದ್ದಾರಿಯಲ್ಲಿಯೂ ಗುಡ್ಡ ಕುಸಿತವಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 69 ರ ಖರ್ವಾ- ಯಲಗುಪ್ಪಾ ತಿರುವಿನಲ್ಲಿ ಘಟನೆ ನಡೆದಿದ್ದು, ಎರಡು ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಹೊನ್ನಾವರ - ಗೇರುಸೊಪ್ಪ- ಸಾಗರ ನಡುವಿನ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮಾಹಿತಿ ದೊರೆಯುತ್ತಿದ್ದಂತೆ, ಹೆದ್ದಾರಿಯಲ್ಲಿ ಬಿದ್ದಿರುವ ಮಣ್ಣು ತೆರವಿಗೆ ತಾಲೂಕು ಆಡಳಿತ ಮುಂದಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು, ಜೆಸಿಬಿ ಮೂಲಕ ಮಣ್ಣು ತೆರವು ಮಾಡುವ ಕಾರ್ಯ ಮುಂದುವರೆಸಿದ್ದಾರೆ. ಸದ್ಯ ಪೊಲೀಸರು ಏಕಮುಖ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದು, ಮಣ್ಣು ತೆರವು ಮಾಡಲಾಗುತ್ತಿದೆ.
ಇದನ್ನೂ ಓದಿ:ಭಾರಿ ಮಳೆ: ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಶಾಲಾ - ಕಾಲೇಜುಗಳಿಗೆ ಇಂದು ರಜೆ - Rain Holiday For Schools