ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ತಮ್ಮ ಪತ್ನಿ ಹೆಸರಿಗೆ ಅಕ್ರಮವಾಗಿ ನಿವೇಶನ ಪಡೆದ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 19ಕ್ಕೆ ನಿಗದಿಪಡಿಸಿದೆ. ಇದೇ ವೇಳೆ ಸಿದ್ದರಾಮಯ್ಯ, ಪತ್ನಿ ಹಾಗು ಬಾಮೈದುನ ಅವರಿಗೆ ಹ್ಯಾಂಡ್ ಸಮನ್ಸ್ ನೀಡುವಂತೆ ಅರ್ಜಿದಾರರಾದ ಸ್ನೇಹಮಯಿ ಕೃಷ್ಣ ಪರ ವಕೀಲರಿಗೆ ಕೋರ್ಟ್ ಆದೇಶಿಸಿತು.
ವಿಚಾರಣೆ ವೇಳೆ ಜಮೀನಿನ ಮೂಲ ಮಾಲೀಕ ದೇವರಾಜು ಪರ ಹಿರಿಯ ವಕೀಲ ದುಷ್ಯಂತ್ ದವೆ, "ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಕ್ರಮವನ್ನು ಎತ್ತಿಹಿಡಿದಿರುವ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿರುವ ಮೇಲ್ಮನವಿ ಅರ್ಜಿ ವಿಭಾಗೀಯ ಪೀಠದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಆದೇಶದಿಂದ ಪ್ರಕರಣಕ್ಕೂ ನಮಗೂ ಸಂಬಂಧವೇ ಇಲ್ಲದಿದ್ದರೂ ವಿಚಾರಣೆ ಎದುರಿಸಬೇಕಾಗಿದೆ. ಆದ್ದರಿಂದ ಅರ್ಜಿ ವಿಚಾರಣೆ ಮುಂದೂಡಬೇಕು" ಎಂದು ಕೋರಿದರು.
ಸರ್ಕಾರದ ಪರ ವಾದಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, "ಪ್ರಕರಣ ಸಂಬಂಧ ಈವರೆಗೂ ಕೆಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಯಾಗಿಲ್ಲ. ಹೀಗಾಗಿ ಕಾಲಾವಕಾಶ ನೀಡಬೇಕು" ಎಂದು ಕೋರಿದರು.
ಸರ್ಕಾರದ ಪರ ವಾದಿಸಿದ ಮತ್ತೊಬ್ಬ ಹಿರಿಯ ವಕೀಲ ಕಪಿಲ್ ಸಿಬಲ್, "ಅರ್ಜಿದಾರರ ಮನವಿಯಂತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೂ ಮುನ್ನ ಪ್ರತಿವಾದಿಗಳ ವಾದ ಕೇಳಬೇಕು. ಹೀಗಾಗಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಯಾಗದಿರುವುದರಿಂದ ಕಾಲಾವಕಾಶ ನೀಡಬೇಕು. ಈ ಪ್ರಕರಣ ಸಂಬಂಧದ ಮೇಲ್ಮನವಿ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿರುವುದರಿಂದ ವಿಚಾರಣೆ ಮುಂದೂಡಿದಲ್ಲಿ ಯಾವುದೇ ದೊಡ್ಡ ಸಮಸ್ಯೆ ಆಗುವುದಿಲ್ಲ" ಎಂದರು.
ಅಲ್ಲದೆ, ದೂರುದಾರ ಸ್ನೇಹಮಯಿ ಕೃಷ್ಣ ವಿನಾಕಾರಣ ಅಡ್ವೋಕೇಟ್ ಜನರಲ್ ವಿರುದ್ದ ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ಇದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.