ಕರ್ನಾಟಕ

karnataka

ETV Bharat / state

ಬೆಂಗಳೂರು ರೇಸ್ ಕೋರ್ಸ್‌ನಲ್ಲಿ ಕುದುರೆ ಪಂದ್ಯಗಳ ಆಯೋಜನೆಗೆ ಹೈಕೋರ್ಟ್ ಅನುಮತಿ - HIGH COURT PERMISSION TO HORSE RACE

ರೇಸ್​ ಕೋರ್ಸ್​ನಲ್ಲಿ ಕುದುರೆ ಪಂದ್ಯಗಳ ಆಯೋಜನೆಗೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್​ ಷರತ್ತುಬದ್ಧ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿ ಆದೇಶಿಸಿದೆ. ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್, ಕರ್ನಾಟಕ ಟ್ರೈನರ್ಸ್​ ಅಸೋಸಿಯೇಷನ್ಸ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘ, ಕರ್ನಾಟಕ ಜಾಕಿಗಳ ಸಂಘ ಸೇರಿದಂತೆ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್​
ಹೈಕೋರ್ಟ್​ (ETV Bharat)

By ETV Bharat Karnataka Team

Published : Jun 18, 2024, 5:05 PM IST

Updated : Jun 18, 2024, 6:31 PM IST

ಬೆಂಗಳೂರು: ನಗರದ ಬೆಂಗಳೂರು ಟರ್ಫ್ ಕ್ಲಬ್(ರೇಸ್ ಕೋರ್ಸ್)ನಲ್ಲಿ ಷರತ್ತುಗಳ ಅನ್ವಯ ಕುದುರೆ ಪಂದ್ಯಗಳನ್ನು ಆಯೋಜನೆ ಮಾಡುವುದಕ್ಕೆ ಹೈಕೋಟ್ ಅನುಮತಿ ನೀಡಿ ಆದೇಶಿಸಿದೆ.

ಕುದುರೆ ಪಂದ್ಯಗಳ ಆಯೋಜನೆಗೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್, ಕರ್ನಾಟಕ ಟ್ರೈನರ್ಸ್​ ಅಸೋಸಿಯೇಷನ್ಸ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘ, ಕರ್ನಾಟಕ ಜಾಕಿಗಳ ಸಂಘ ಸೇರಿದಂತೆ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ, 2024ರ ಮಾರ್ಚ್ ತಿಂಗಳಲ್ಲಿ ಸರ್ಕಾರ ಅನುಮತಿ ನೀಡಿದ್ದ ಷರತ್ತುಗಳ ಅನ್ವಯ ಕುದುರೆ ಪಂದ್ಯಗಳನ್ನು ಆಯೋಜನೆ ಮಾಡವುದಕ್ಕೆ ಅವಕಾಶ ನೀಡಿ ಆದೇಶಿಸಿದೆ.

ಅಲ್ಲದೆ, ಆನ್‌ಕೋರ್ಸ್(ಬೆಂಗಳೂರಿನಲ್ಲಿ ನಡೆಯುವ ಪಂದ್ಯ) ಮತ್ತು ಆಫ್ ಕೋರ್ಸ್(ಹೊರಭಾಗಗಳಲ್ಲಿ ಮೈಸೂರು, ಬಾಂಬೆ ನಡೆಯುವ ಪಂದ್ಯಗಳು)ಗಳನ್ನು ಬಿಟಿಸಿ ಹಮ್ಮಿಕೊಳ್ಳಬಹುದಾಗಿದೆ. ಅಲ್ಲದೆ, ರಾಜ್ಯ ಸರ್ಕಾರವು ಕುದುರೆ ಪಂದ್ಯಗಳ ಆಯೋಜನೆ ವೇಳೆ ಅದರ ಮೇಲ್ವಿಚಾರಣೆ ಮತ್ತು ನಿಯಂತ್ರಣವವನ್ನು ಮಾಡಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಆದೇಶದಿಂದಾಗಿ ಕಳೆದ ಮೂರು ತಿಂಗಳನಿಂದ ಸ್ಥಗಿತಗೊಂಡಿದ್ದ ಕುದುರೆ ಪಂದ್ಯಾವಳಿಗಳು ಪುನಾರಂಭವಾಗಲಿದೆ. ಅರ್ಜಿಯ ಕುರಿತಂತೆ ಈ ಹಿಂದೆ ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ರೇಸ್ ಕೋರ್ಸ್​ ಅಕ್ರಮಗಳ ತಾಣವಾಗಿದೆ. ಪ್ರತಿದಿನ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆಯುತ್ತಿದೆ. ಜತೆಗೆ, ತೆರಿಗೆ ವಂಚನೆಗೆ ಬುಕ್ಕಿಗಳು ಪ್ರಯತ್ನ ಮಾಡುತ್ತಿದ್ದು, ದಾಳಿ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಅಲ್ಲದೆ, ನೂರಾರು ಮಂದಿ ಸಾಮಾನ್ಯ ಜನ ಕುದುರೆ ಪಂದ್ಯಗಳಲ್ಲಿ ತೊಡಗಿ ಜೀವನ ನಡೆಸುವುದಕ್ಕೆ ಪರದಾಡುತ್ತಿದ್ದಾರೆ, ಆಟೋ ಚಾಲಕರು ತಮ್ಮ ದುಡಿಮೆಯನ್ನು ಪಂದ್ಯಗಳಲ್ಲಿ ವ್ಯಯ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಪಂದ್ಯಗಳ ಆಯೋಜನೆಗೆ ಅನುಮತಿ ನಿರಾಕರಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ರೇಸ್ ಕೋರ್ಸ್ ಪರ ವಕೀಲರು, ರೇಸ್‌ಕೋರ್ಸ್ ಆಡಳಿತ ಮಂಡಳಿಯಲ್ಲಿ ಸರ್ಕಾರದ ಹಣಕಾಸು ಕಾರ್ಯದರ್ಶಿಗಳು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸದಸ್ಯರಾಗಿದ್ದಾರೆ. ಕುದುರೆ ಪಂದ್ಯಗಳ ಆಯೋಜನೆಯ ಎಲ್ಲ ಚಟುವಟಿಕೆಗಳು ಸರ್ಕಾರದ ಗಮನಕ್ಕೆ ಇರುತ್ತವೆ. ಅಕ್ರಮಗಳು ನಡೆಸುವ ಸಾಧ್ಯತೆಗಳು ಇಲ್ಲ ಎಂದು ವಿವರಿಸಿದರು.

ತೆರಿಗೆ ವಂಚನೆಗಾಗಿ ಅಕ್ರಮವಾಗಿ ಬೆಟ್ಟಿಂಗ್ ಮಾಡಿದ ಆರೋಪದಲ್ಲಿ ಆರೋಪ ಪಟ್ಟಿ ದಾಖಲಿಸಿರುವ ಬುಕ್ಕಿಗಳ ಪರವಾನಿಗೆಯನ್ನು ರದ್ದು ಪಡಿಸುವುದಕ್ಕಾಗಿ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಕುದುರೆ ಪಂದ್ಯಗಳ ಆಯೋಜನೆಯಲ್ಲಿ ಬುಕ್ಕಿ ಕಂಪೆನಿಗಳಿಗೆ ಯಾವುದೇ ಸಂಬಂಧವಿರುವುದಿಲ್ಲ. ಹೀಗಾಗಿ ಕುದುರೆ ಪಂದ್ಯಗಳ ಆಯೋಜನೆಗೆ ಅವಕಾಶ ಕಲ್ಪಿಸಬೇಕು ಎಂದು ಪೀಠಕ್ಕೆ ಕೋರಿದರು.

ಜತೆಗೆ, ಪ್ರತಿದಿನ ಒಂದು ಕೋಟಿಗಿಂತಲೂ ಹೆಚ್ಚು ರೂ.ಗಳ ತೆರಿಗೆ ಸಂಗ್ರಹವಾಗುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದೆ. ಅಲ್ಲದೆ, ಕುದುರೆ ಪಂದ್ಯಗಳಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಇದನ್ನು ಅವಲಂಬಿಸಿದ್ದಾರೆ. ಆದ್ದರಿಂದ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಬೇಕು ಎಂದು ಕೋರಿದ್ದರು.

ಇದನ್ನೂ ಓದಿ:ಭವಾನಿ ರೇವಣ್ಣಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ - RELIEF FOR BHAVANI REVANNA

Last Updated : Jun 18, 2024, 6:31 PM IST

ABOUT THE AUTHOR

...view details