ಕರ್ನಾಟಕ

karnataka

ETV Bharat / state

ಮೃಗೀಯವಾಗಿ ಸರ್ಕಾರ ನಡೆಸುತ್ತಿರುವವರು ಗಾಂಧೀಜಿ ಸ್ಮರಣೆ ಮಾಡುತ್ತಾರಾ?: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ - H D KUMARASWAMY

ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್​ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

CONGRESS SESSION CENTENARY PROGRAM  BELAGAVI CONGRESS SESSION  BENGALURU  R ASHOK  H D KUMARASWAMY
ಹೆಚ್.ಡಿ.ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Dec 26, 2024, 1:42 PM IST

Updated : Dec 26, 2024, 1:56 PM IST

ಬೆಂಗಳೂರು:ಇವತ್ತು ಬೆಳಗಾವಿಯಲ್ಲಿ ಗಾಂಧೀಜಿ ಶತಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಆದರೆ, ಅಲ್ಲಿನ ಕಟೌಟ್​​ಗಳಲ್ಲಿ ಗಾಂಧೀಜಿಯೇ ಇಲ್ಲ. ಕಟೌಟ್​​ಗಳಲ್ಲಿ ಈಗ ಆಧುನಿಕ ಗಾಂಧಿಗಳಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ''ಗಾಂಧೀಜಿ ಅವರ ಹೆಸರಲ್ಲಿ ಒಂದು ವರ್ಷದ ಕಾರ್ಯಕ್ರಮ ಮಾಡ್ತಾರಂತೆ ಈ ಸರ್ಕಾರ. ದೊಡ್ಡ ದೊಡ್ಡ ಆಕಾಶ ಎತ್ತರಕ್ಕೆ ಕಟೌಟ್​​ಗಳನ್ನು ನೋಡಿದೆ. ಇವತ್ತು ಈ ರಾಜ್ಯ ಸರ್ಕಾರವನ್ನು ಮೃಗೀಯವಾಗಿ ನಡೆಸುತ್ತಿದ್ದಾರೆ. ಅಂತಹ ಕಾಂಗ್ರೆಸ್​​ನವರು ಗಾಂಧೀಜಿ ಸ್ಮರಣೆ ಮಾಡುತ್ತಾರಾ?. ಇದರ ಬಗ್ಗೆ ಮುಂದೆ ಮಾತಾಡೋಣ'' ಎಂದರು.

ಹೆಚ್.ಡಿ.ಕುಮಾರಸ್ವಾಮಿ (ETV Bharat)

ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡದ ಹೆಚ್ ಡಿಕೆ, ಮೊಟ್ಟೆ ಪ್ರಕರಣದ ಬಗ್ಗೆ ಆಮೇಲೆ ಮಾತನಾಡೋಣ ಎಂದು ಹೇಳಿದರು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕೆ:''ಈಗಿನ ನಕಲಿ ಕಾಂಗ್ರೆಸ್ ಪಕ್ಷ, ನಕಲಿ ಗಾಂಧಿ ಕುಟುಂಬದಿಂದ, ನಕಲಿ ಗಾಂಧಿ ಕುಟುಂಬಕ್ಕಾಗಿ, ನಕಲಿ ಗಾಂಧಿ ಕುಟುಂಬಕ್ಕೋಸ್ಕರ '' ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ''ಸ್ವಾತಂತ್ರ್ಯ ದೊರಕಿತು. ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇಲ್ಲ. ಅದನ್ನು ವಿಸರ್ಜಿಸಿ ಎಂದು ಹೇಳಿದ ಮಹಾತ್ಮ ಗಾಂಧಿಯವರ ಮಾತನ್ನು ಧಿಕ್ಕರಿಸಿದ ನಕಲಿ ಗಾಂಧಿಗಳು, ಇವತ್ತು ಯಾವ ನೈತಿಕತೆಯಿಂದ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಆಚರಿಸುತ್ತಿದ್ದಾರೆ?'' ಎಂದು ಪ್ರಶ್ನಿಸಿದ್ದಾರೆ.

''ಸ್ವಾತಂತ್ರ ಪೂರ್ವದ ಕಾಂಗ್ರೆಸ್ ಅಂದರೆ ಅದು ರಾಜಕೀಯ ಪಕ್ಷವಾಗಿರಲಿಲ್ಲ. ದೇಶವನ್ನ ದಾಸ್ಯದಿಂದ ಮುಕ್ತಿಗೊಳಿಸಲು ಹೋರಾಡುತ್ತಿದ್ದ ದೇಶಭಕ್ತರ ಒಕ್ಕೋರಲಿನ ವೇದಿಕೆಯಾಗಿತ್ತು. ಆದರೆ, ಸ್ವತಂತ್ರ ಬಂದ ನಂತರ ಮಹಾತ್ಮ ಗಾಂಧೀಜಿ ಅವರ ಮಾತನ್ನು ಧಿಕ್ಕರಿಸಿ, ಕೇವಲ ಅಧಿಕಾರಕ್ಕಾಗಿ, ಕಾಂಗ್ರೆಸ್ ಪಕ್ಷವನ್ನು ಒಂದು ಕುಟುಂಬದ ಆಸ್ತಿ ಮಾಡಿಕೊಂಡ ನಕಲಿ ಗಾಂಧಿಗಳು ಮತ್ತು ಅವರ ಅನುಯಾಯಿಗಳು ಇವತ್ತು 'ಗಾಂಧಿ ಭಾರತ' ಹೆಸರಿನಲ್ಲಿ ಐತಿಹಾಸಿಕ ಬೆಳಗಾವಿ ಅಧಿವೇಶನ ಆಚರಿಸುತ್ತಿರುವುದು ವಿಪರ್ಯಾಸ'' ಎಂದಿದ್ದಾರೆ.

''ಗಾಂಧೀಜಿ ಮಾತ್ರವಲ್ಲ, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರೂ ಸಹ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದರು. ಕಾಂಗ್ರೆಸ್ ಪಕ್ಷ ಸೇರುವುದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಅಂಬೇಡ್ಕರರು ದಲಿತರಿಗೆ ಸಲಹೆ ನೀಡಿದ್ದರು. ಸ್ವತಂತ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ಗಾಂಧಿ, ಸರ್ದಾರ್ ಪಟೇಲ್ ಅಂತಹ ಮೇರು ನಾಯರನ್ನು ಒಳಗೊಂಡಿದ್ದ ಸ್ವಾತಂತ್ಯ ಪೂರ್ವ ಕಾಂಗ್ರೆಸ್​​ಗೂ, ಅಧಿಕಾರಕ್ಕಾಗಿ ನಕಲಿ ಗಾಂಧಿಗಳು ನಡೆಸುತ್ತಿರುವ ಈಗಿನ ನಕಲಿ ಕಾಂಗ್ರೆಸ್​ಗೂ ಸಂಬಂಧವೇ ಇಲ್ಲ'' ಎಂದು ಟೀಕಿಸಿದ್ದಾರೆ.

''ದೇಶದ ಜನರಿಂದ ಪದೇ ಪದೆ ತಿರಸ್ಕಾರಗೊಳ್ಳುತ್ತಿರುವ ನಕಲಿ ಗಾಂಧಿಗಳನ್ನು ಮತ್ತೊಮ್ಮೆ ರೀಲಾಂಚ್ ಮಾಡಲು ರಾಜ್ಯದ 20 ಕೋಟಿ ರೂ. ತೆರಿಗೆ ಹಣ ಪೋಲು ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ನಕಲಿ ಗಾಂಧಿಗಳ ಗುಲಾಮಗಿರಿ ಮಾಡಲು ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ'' ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ವೀರಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ: ವಿಶೇಷ ಸರಸ್ ಮೇಳ, ಖಾದಿ ಉತ್ಸವಕ್ಕೆ ಚಾಲನೆ

Last Updated : Dec 26, 2024, 1:56 PM IST

ABOUT THE AUTHOR

...view details