ರಾಮನಗರ: "ಇಷ್ಟು ಗ್ಯಾರಂಟಿಗಳನ್ನು ಕೊಟ್ಟು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಿ ನಮ್ಮನ್ನು ಗೆಲ್ಲಿಸದಿದ್ದರೆ, ಜನ ಗ್ಯಾರಂಟಿಗಳನ್ನು ತಿರಸ್ಕರಿಸಿದಂತೆ. ಒಂದು ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆಯದೇ ಇದ್ದರೆ ಗ್ಯಾರಂಟಿಗಳನ್ನು ರದ್ದು ಮಾಡುವುದೇ ಉತ್ತಮ. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಬಳಿಯೂ ಮಾತನಾಡಿದ್ದೇನೆ" ಎಂದು ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.
ರಾಮನಗರ ತಾಲೂಕಿನ ಶ್ರೀಗಿರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಇಷ್ಟೆಲ್ಲಾ ಮಾಡಿ ಜನ ನಮಗೆ ಮತ ಹಾಕದೆ ತಿರಸ್ಕರಿಸಿದರೆ ಈ ಗ್ಯಾರಂಟಿಗಳಿಗೆ ಬೆಲೆ ಇಲ್ಲ, ಅಕ್ಷತೆಗೆ ಬೆಲೆ ಇದೆ ಎಂದು ತೀರ್ಮಾನ ಮಾಡಬೇಕಾಗುತ್ತದೆ. ಆಗ ನಾವೂ ಗ್ಯಾರಂಟಿಗಳನ್ನು ರದ್ದು ಮಾಡಿ, ಅಕ್ಷತೆ ಹಾಕಿ, ದೇವಸ್ಥಾನ ಕಟ್ಟಿ ಪೂಜೆ ಮಾಡಿ, ಮತ ಹಾಕಿಸಿಕೊಳ್ಳುತ್ತೇವೆ" ಎಂದು ಹೇಳಿದರು.
ಈ ಹಿಂದೆ ಕಾಂಗ್ರೆಸ್ಗೆ ಹೆಚ್ಚು ಮತ ನೀಡಿರುವ ಗ್ರಾಮಗಳ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದ ಶಾಸಕರು ಮತ್ತೊಮ್ಮೆ, "ನಾವು ಐದು ವರ್ಷ ಜನರ ಕೆಲಸ ಮಾಡ್ತೀವಿ. ಅದರಂತೆ ಮತ ನೀಡಿ. ನಿಮ್ಮ ಮತ ಅಕ್ಷತೆ ಕಾಳಿಗಾ, ಐದು ಗ್ಯಾರಂಟಿಗಾ? ಈ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿದರೆ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ. ಗೆಲ್ಲಿಸದೇ ಇದ್ದರೆ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆ ಜನರಿಗೆ ಅವಶ್ಯಕತೆ ಇಲ್ಲ ಎಂದು ತೀರ್ಮಾನವಾಗಲಿದೆ ಅಲ್ಲವೆ? ಈ ಬಗ್ಗೆ ಜನರು ಯೋಚಿಸಿ" ಎಂದರು.