ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಚುನಾವಣೆ ಯಾವ ರೀತಿ ನಡೆಯಲಿದೆ ಎನ್ನುವುದು ಗೊತ್ತಿದೆ. ಎಲ್ಲ ರೀತಿಯಲ್ಲಿಯೂ ಈ ಚುನಾವಣೆಯನ್ನು ಎದುರಿಸಲು ಮಾನಸಿಕವಾಗಿ ಸಿದ್ದನಾಗಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಹೇಳಿದರು.
ಯಡಿಯೂರಪ್ಪ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ ಆರೋಗ್ಯ ಕ್ಷೇತ್ರದಲ್ಲಿ ಸುದೀರ್ಘವಾಗಿ ಕ್ರಾಂತಿಕಾರಕ ಬದಲಾವಣೆ ತಂದಿದ್ದೇವೆ. ಬಡವರು, ನಿರ್ಗತಿಕರಿಗೆ ಕೈಗೆಟುಕುವ ದರದಲ್ಲಿ ಹೃದ್ರೋಗ ಚಿಕಿತ್ಸೆ ಸಿಗುವಂತೆ ಮಾಡಿದ್ದೇವೆ. ಮೋದಿ ಅವರಿಗೆ ಇದು ಹ್ಯಾಟ್ರಿಕ್ ಚುನಾವಣೆ. ಅವರ ನಾಯಕತ್ವದಲ್ಲಿ ದೇಶ ಆರ್ಥಿಕವಾಗಿ ಮತ್ತು ಎಲ್ಲ ಕ್ಷೇತ್ರಗಳಲ್ಲಿಯೂ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಗುವ ಕೆಲಸವಾಗುತ್ತಿದೆ ಎಂದರು.
ಮೋದಿ ಸರ್ಕಾರದಿಂದ ಹೆಚ್ಚು ಹೆಚ್ಚು ಸಾಧಕರಿಗೆ, ಪರಿಣತರಿಗೆ ವಿಶೇಷವಾದ ಪ್ರೋತ್ಸಾಹ ಕೊಡುವ ಕೆಲಸವಾಗುತ್ತಿದೆ. ಹಾಗಾಗಿ ಈ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೇವೆ. ಇನ್ನೆರಡು ದಿನದಲ್ಲಿ ಪಕ್ಷಕ್ಕೆ ಸೇರಲಿದ್ದೇನೆ. ಈಗಾಗಲೇ ಪಕ್ಷದ ಜೊತೆ ಇದ್ದೇನೆ. ಅಧಿಕೃತವಾಗಿ ಇನ್ನೆರಡು ದಿನದಲ್ಲಿ ಸೇರುತ್ತೇನೆ. ಈ ಸಂಬಂಧ ಈಗಾಗಲೇ ಪಕ್ಷದ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಎಂದರೆ ರಾಜಕೀಯವೆ. ಆದರೆ ರಾಜಕೀಯದಲ್ಲೂ ನಾನು ರಾಜಕೀಯ ಮಾಡಲ್ಲ. ನಮಗೆ ಇರುವ ದೀರ್ಘಕಾಲದ ಅನುಭವ ಬಳಸಿಕೊಳ್ಳುತ್ತೇನೆ. ಬಹಳ ಮುಖ್ಯವಾಗಿ ಆರೋಗ್ಯ ಕ್ಷೇತ್ರ, ಶಿಕ್ಷಣ, ಕೃಷಿ, ತಂತ್ರಜ್ಞಾನ ಇವು ನಾಲ್ಕು ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾಗಿವೆ. ಹೀಗಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಯಾವ ರೀತಿ ಹೊಸ ಸಾಧನೆ ಮಾಡಲು ಸಾಧ್ಯ ಎಂದು ಈಗಾಗಲೇ ಜಯದೇವ ಹೃದ್ರೋಗ ಸಂಸ್ಥೆಯನ್ನು ಅಭಿವೃದ್ಧಿಪಡಿಸಿ ಸಾಧಿಸಿ ತೋರಿಸಿದ್ದೇವೆ. ಇದನ್ನು ರಾಷ್ಟ್ರಮಟ್ಟದಲ್ಲಿ ತಂದು ತೋರಿಸಬೇಕಿದೆ. ಎರಡು ಮೂರು ದಿನದಿಂದ ಪಕ್ಷಾತೀತವಾಗಿ ಎಲ್ಲ ವರ್ಗದ ಜನ ಕರೆ ಮಾಡಿ ಮಾತನಾಡುತ್ತಿದ್ದಾರೆ. ರಾಷ್ಟ್ರಮಟ್ಟಕ್ಕೆ ನಿಮ್ಮ ಸೇವೆ ಕೊಡಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ರಾಜಕೀಯ ಪ್ರವೇಶ ಮಾಡುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.