ಬೆಳ್ತಂಗಡಿ (ದಕ್ಷಿಣ ಕನ್ನಡ): ಅನಾರೋಗ್ಯದಿಂದ ನಿಧನರಾದ ಹಿರಿಯ ರಾಜಕಾರಣಿ, ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ಅಂತ್ಯಕ್ರಿಯೆಯು ಗುರುವಾರ ನೆರವೇರಿತು. ವಸಂತ ಬಂಗೇರ ಅವರು ಅನಾರೋಗ್ಯದಿಂದ ಮೇ 08 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಕುವೆಟ್ಟಿನ ಕೇದೆಯ ಹೊಸಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಬೆಂಗಳೂರಿನಿಂದ ಗುರುವಾರ ಬೆಳಗ್ಗೆ ಪಾರ್ಥೀವ ಶರೀರವನ್ನು ಹಳೆಕೋಟೆಯ ಮನೆಗೆ ತರಲಾಗಿತ್ತು. ಬಳಿಕ ಅಲ್ಲಿಂದ ಸಾರ್ವಜನಿಕರ ಅಂತಿಮ ನಮನಕ್ಕಾಗಿ ತಾಲೂಕು ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಅಭಿಮಾನಿಗಳು ಬಂದು ಕೆ. ವಸಂತ ಬಂಗೇರ ಅವರ ಅಂತಿಮ ದರ್ಶನ ಪಡೆದರು.
ರಾಜಕೀಯ ನಾಯಕರುಗಳಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಲೋಕಸಭಾ ಚುನಾವಣಾ ಅಭ್ಯರ್ಥಿ ಪದ್ಮರಾಜ್ ಆರ್., ಕೋಟ ಶ್ರೀನಿವಾಸ ಪೂಜಾರಿ, ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಹಲವರು ಅಂತಿಮ ದರ್ಶನಕ್ಕೆ ಆಗಮಿಸಿದ್ದರು.