ಬೆಂಗಳೂರು: ರಸ್ತೆ ಖಾಲಿಯಿದೆ ಅಂತಾ ನೀವೇನಾದರೂ ಗಂಟೆಗೆ 130ಕ್ಕಿಂತ ಹೆಚ್ಚು ವೇಗವಾಗಿ ವಾಹನ ಚಲಾಯಿಸುತ್ತೀರಾ ? ಹಾಗಾದರೆ ಓವರ್ ಸ್ಪೀಡ್ ಕಡಿಮೆ ಮಾಡಿಕೊಳ್ಳಿ. ಇಲ್ಲದಿದ್ದರೆ ಪೊಲೀಸರು ನಿಮ್ಮ ಮೇಲೆ ಎಫ್ಐಆರ್ ದಾಖಲಿಸುವುದಂತೂ ಗ್ಯಾರಂಟಿ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯದಲ್ಲಿ ನಿಗದಿಕ್ಕಿಂತ ಹೆಚ್ಚು ವೇಗವಾಗಿ ವಾಹನ ಚಾಲನೆ ಕಂಡು ಬಂದರೆ ಅಂತಹ ಚಾಲಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲು ಸಂಚಾರ ಮತ್ತು ರಸ್ತೆ ಸುರಕ್ಷತೆ ಇಲಾಖೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಆಗಸ್ಟ್ 1 ರಿಂದ ಈ ನಿಯಮ ಜಾರಿ ಬರಲಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವೇಗವಾಗಿ ವಾಹನ ಚಾಲನೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿವೆ. ಇದರಿಂದ ಸಾವು-ನೋವುಗಳ ಸಂಖ್ಯೆ ಅಧಿಕವಾಗುತ್ತಿವೆ. ನಿಗದಿತ ಪ್ರಮಾಣದಲ್ಲಿ ವಾಹನ ಚಾಲನೆ ಮಾಡುವಂತೆ ತಿಳಿ ಹೇಳಿದರೂ ಚಾಲಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ನಿನ್ನೆ ತಪಾಸಣೆ ನಡೆಸಿದಾಗ 155 ಮಂದಿ ಚಾಲಕರು 130ಕ್ಕಿಂತ ಹೆಚ್ಚು ವೇಗವಾಗಿ ವಾಹನ ಚಾಲನೆ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ಇದನ್ನ ತಡೆಯಲು ಆಗಸ್ಟ್ 1ರಿಂದ ರಾಜ್ಯದಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚು ವಾಹನ ಚಾಲನೆ ಮಾಡುವುದು ಕಂಡು ಬಂದರೆ ಚಾಲಕರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಅಲೋಕ್ ಕುಮಾರ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮದ್ಯ ಸೇವನೆ, ವ್ಹೀಲಿಂಗ್, ಪದೇ ಪದೆ ಸಂಚಾರ ನಿಯಮ ಉಲ್ಲಂಘನೆ; ಈ ವರ್ಷ ರದ್ದಾದ ಡ್ರೈವಿಂಗ್ ಲೈಸೆನ್ಸ್ ಎಷ್ಟು? - driving licence cancelled