ಬೆಳಗಾವಿ:ಕೆಲವರ ಹಿಡನ್ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರ ಹಾಕಿದರು.
ಬೆಳಗಾವಿ ನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಇದಕ್ಕೆ ಅಧಿಕಾರಿಗಳು ಎಷ್ಟು ಕಾರಣವೊ, ಜನಪ್ರತಿನಿಧಿಗಳು ಅಷ್ಟೇ ಕಾರಣ. ಹಿಡನ್ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಬ್ಬರ ಮೇಲೆ ಬೊಟ್ಟು ಮಾಡಿ ತೋರಿಸೋಕೆ ಬರೋದಿಲ್ಲ. ನಿಸ್ವಾರ್ಥತೆಯಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ನಾವೆಲ್ಲ ರಾಜಕಾರಣ ಮಾಡಿದರೆ ಬೆಳಗಾವಿಯನ್ನ ಸ್ವರ್ಗ ಮಾಡಬಹುದು. ಆದರೆ, ಹಿಡನ್ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಸೋರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಳಗಾವಿ ರಾಜ್ಯದ ಅತಿದೊಡ್ಡ ಜಿಲ್ಲೆ, ಎರಡನೇ ರಾಜಧಾನಿ ಅಂತಾ ಹೆಮ್ಮೆಯಿಂದ ಹೇಳುತ್ತೇವೆ. ಬೆಳಗಾವಿ ತಾಲೂಕು ಉಡುಪಿ ಜಿಲ್ಲೆಗಿಂತ ದೊಡ್ಡದು. ಬೆಳಗಾವಿ ತಾಲೂಕಿನಲ್ಲಿ ಏಂಟೂವರೆ ಲಕ್ಷ ಜನಸಂಖ್ಯೆ ಇದ್ದರೆ, ಉಡುಪಿ ಜಿಲ್ಲೆ 9 ಲಕ್ಷ ಜನ ಸಂಖ್ಯೆ ಹೊಂದಿದೆ. ಇಂತಹ ದೊಡ್ಡ ಪಾಲಿಕೆ ಹೀಗಾಗೋಕೆ ಹಿಡನ್ ಅಜೆಂಡಾಗಳೇ ಕಾರಣ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು.
ಬಿಜೆಪಿ- ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾರಥ್ಯದಲ್ಲಿ ಆಗಸ್ಟ್ 31 ರಂದು ಸಚಿವರು, ಶಾಸಕರಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆಗೆ ಕಬ್ಬು ಅರೆಯಲು ಕರ್ನಾಟಕ ಪರಿಸರ ಮಂಡಳಿ ಅನುಮತಿ ನಿರಾಕರಿಸಿದ್ದಕ್ಕೆ ದ್ವೇಷ ರಾಜಕೀಯ ಕಾರಣವಲ್ಲ. ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಂಡಿದೆ. ದ್ವೇಷ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಲಿ, ನಾನಾಗಲಿ ದ್ವೇಷದ ರಾಜಕೀಯ ಮಾಡುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಸರ್ಕಾರದ ಮೇಲೆ ಇಲ್ಲದ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥಿಸಿಕೊಂಡರು.
ಪಾಲಿಕೆ ನಿರ್ಧಾರಕ್ಕೆ ನನ್ನ ಸಮ್ಮತಿ ಇಲ್ಲ: ನಿನ್ನೆ ಮಹಾನಗರ ಪಾಲಿಕೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಸಮ್ಮತಿಯಿಲ್ಲ. ಕೋರ್ಟ್ ಆದೇಶವಾಗಿದೆ. ಈಗ ಚರ್ಚೆ ಅಷ್ಟೇ ಮಾಡಲು ಸಾಧ್ಯ. ಕೋರ್ಟ್ ಆದೇಶದ ಪ್ರಕಾರ ಕ್ರಮ ಆಗುತ್ತದೆ. 8 ಕೋಟಿ ಜಿಎಸ್ಟಿ ಹಣ ಸಹ ಕೊಟ್ಟಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.