ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ (ETV Bharat) ಬೆಂಗಳೂರು/ಬೆಳಗಾವಿ:ಬೇಸಿಗೆ ರಜೆಯ ಮಜಾದಲ್ಲಿದ್ದ ವಿದ್ಯಾರ್ಥಿಗಳು ಇಂದಿನಿಂದ ಶಾಲೆಗೆ ಮರಳಬೇಕಿದೆ. ಆಟದಲ್ಲಿದ್ದ ಮಕ್ಕಳು ಪಾಠದ ಕಡೆ ಹೊರಳಬೇಕಿದೆ. ಮೈದಾನಗಳನ್ನು ಬಿಟ್ಟು ಸ್ಕೂಲ್ ಬ್ಯಾಗ್ಗಳನ್ನು ಹೆಗಲಿಗೇರಿಸಿಕೊಂಡು ಸಮವಸ್ತ್ರ ಧರಿಸಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕಬೇಕಿದೆ. ಮೊದಲ ದಿನ ಶಾಲೆಗಳಿಗೆ ಆಗಮಿಸುವ ಮಕ್ಕಳನ್ನು ಸ್ವಾಗತಿಸುವ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
2024-25ನೇ ಸಾಲಿನ ಶೈಕ್ಷಣಿಕ ವರ್ಷ ಇಂದಿನಿಂದ ಆರಂಭಗೊಳ್ಳುತ್ತಿದ್ದು, ತಳಿರು ತೋರಣಗಳೊಂದಿಗೆ ಶಾಲಾ ಪ್ರಾರಂಭೋತ್ಸವದ ಮೂಲಕ ಮಕ್ಕಳನ್ನು ಶಾಲೆಗಳಿಗೆ ಸ್ವಾಗತ ಕೋರಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೂಚನೆ ನೀಡಿದೆ. ಮಧ್ಯಾಹ್ನದ ಬಿಸಿಯೂಟವನ್ನು ಸಿಹಿಯೂಟದೊಂದಿಗೆ ಆರಂಭಿಸಬೇಕು, ಶಾಲಾ ಪ್ರಾರಂಭೋತ್ಸವದಂದೇ ಪಠ್ಯಪುಸ್ತಕವನ್ನು ಮಕ್ಕಳಿಗೆ ವಿತರಿಸಬೇಕು ಎನ್ನುವ ಸೂಚನೆ ನೀಡಿದೆ.
ಶಾಲಾ ಶಿಕ್ಷಕರ ವೃಂದ (ETV Bharat) 2024-25ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಶಾಲಾ ಪ್ರವೇಶಾತಿ ಮತ್ತು ದಾಖಲಾತಿಯನ್ನು ಮೇ 31 ರಿಂದ ಶಾಲಾ ಪ್ರಾರಂಭೋತ್ಸವದೊಂದಿಗೆ ಆರಂಭಿಸಿ ಜೂನ್ 30ರಂದು ಮುಕ್ತಾಯಗೊಳಿಸಬೇಕು. ದಾಖಲಾತಿ ಆಂದೋಲನದ ಮೂಲಕ ವ್ಯಾಪಕ ಪ್ರಚಾರ ನೀಡಿ ಅರ್ಧದಲ್ಲಿಯೇ ಶಾಲೆ ಬಿಟ್ಟಿರುವ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಬೇಕು. ಶಿಕ್ಷಕರು, ಮುಖ್ಯಶಿಕ್ಷಕರು ಎಸ್.ಡಿ.ಎಂ.ಸಿ ಸಹಯೋಗದೊಂದಿಗೆ ಮನೆ ಮನೆಗೆ ಭೇಟಿ ನೀಡಿ ಪೋಷಕರ ಮನವೊಲಿಸಿ ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವ ಕೆಲಸ ಮಾಡಬೇಕು ಎನ್ನುವ ಮೂಲಕ ಒಂದು ತಿಂಗಳು ಶಿಕ್ಷಕರಿಗೆ ಪಠ್ಯೇತರವಾದ ಟಾಸ್ಕ್ ನೀಡಿ ದಾಖಲಾತಿ ಅಭಿಯಾನಕ್ಕೆ ಸೂಚಿಸಿದೆ.
ಶಾಲಾ ಶಿಕ್ಷಕರ ವೃಂದ (ETV Bharat) ಈ ಕುರಿತುಈಟಿವಿ ಭಾರತ ಜೊತೆಗೆ ಮುಕ್ತವಾಗಿ ಮಾತನಾಡಿದ ಬೆಳಗಾವಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈಗಾಗಲೇ ಶಿಕ್ಷಕರ ಜೊತೆಗೆ ಸಭೆ ಮಾಡಿದ್ದು, ಶಾಲಾ ಕೊಠಡಿಗಳು, ನೀರಿನ ಟ್ಯಾಂಕ್, ಶೌಚಾಲಯ, ಬಿಸಿಯೂಟದ ಪಾತ್ರೆಗಳನ್ನು ಸ್ವಚ್ಛಗೊಳಿಸಲಾಗಿದೆ. ಇನ್ನು, ಮಕ್ಕಳ ಶಾಲಾ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿದ್ದು, ದಾಖಲಾತಿ ಆಂದೋಲನ ಮಾಡಿದ್ದಾರೆ. ಅಲ್ಲದೇ ಅಂಗನವಾಡಿಯಲ್ಲಿದ್ದ ಮಕ್ಕಳನ್ನು ನೇರವಾಗಿ 1ನೇ ತರಗತಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಬೇರೆ ಶಾಲೆಯ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವ ಕೆಲಸವೂ ಆಗುತ್ತಿದೆ. ಒಟ್ಟಾರೆ ಶೇ.20ರಷ್ಟು ದಾಖಲಾತಿ ಹೆಚ್ಚಿಸುವ ಗುರಿ ಶಿಕ್ಷಕರಿಗೆ ನೀಡಲಾಗಿದೆ ಎಂದರು.
ಹಬ್ಬದ ವಾತಾವರಣ: ಮೊದಲ ದಿನ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂವು, ಚಾಕೊಲೇಟ್ ಸೇರಿ ಸಿಹಿ ತಿನಿಸು ಕೊಟ್ಟು ಬರಮಾಡಿಕೊಳ್ಳಲಾಗುತ್ತದೆ. ಅಲ್ಲದೇ ಮಧ್ಯಾಹ್ನದ ಬಿಸಿಯೂಟಕ್ಕೆ ವಿಶೇಷ ಸಿಹಿ ಮಾಡಲಾಗುತ್ತದೆ. ತಳಿರು ತೋರಣಗಳಿಂದ ಶಾಲೆಗಳನ್ನು ಶೃಂಗರಿಸಲಾಗುತ್ತಿದ್ದು, ಶುಕ್ರವಾರ ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿರುತ್ತದೆ. ಇನ್ನು ಗುಣಮಟ್ಟದ ಶಿಕ್ಷಣ ನೀಡುವ ಹಿನ್ನೆಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಲು 600ಕ್ಕೂ ಅಧಿಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಆಗಿದೆ. ಬೆಳಗಾವಿ ಜಿಲ್ಲೆಯ 5,098 ಶಾಲೆಗಳಲ್ಲಿ 8,76,905 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಮೋಹನಕುಮಾರ ಹಂಚಾಟೆ ಮಾಹಿತಿ ನೀಡಿದರು.
ಪಠ್ಯ-ಪುಸ್ತಕಗಳು (ETV Bharat) 1ನೇ ತರಗತಿ ಪ್ರವೇಶದ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಮೋಹನಕುಮಾರ, ಎಲ್ಕೆಜಿಗೆ 4 ವರ್ಷ, 1ನೇ ತರಗತಿಗೆ 6 ವರ್ಷ ವಯಸ್ಸಾಗಿರಬೇಕು ಎಂಬ ಸರ್ಕಾರದ ಆದೇಶ 2025-26ನೇ ಸಾಲಿಗೆ ಅನ್ವಯ ಆಗುತ್ತದೆ. ಈ ವರ್ಷ ಇದು ಯಾವುದೇ ರೀತಿ ಅನ್ವಯ ಆಗುವುದಿಲ್ಲ. ಹಾಗಾಗಿ, ಯಾವ ಪಾಲಕರು ಗೊಂದಲಕ್ಕೆ ಒಳಗಾಗಬಾರದು ಎಂದು ಸ್ಪಷ್ಟಪಡಿಸಿದರು.
ಮುಂದಿನ ವರ್ಷದಿಂದ ಹೊಸ ಆದೇಶ: ಇನ್ನು 15 ವರ್ಷ ಪೂರ್ಣವಾಗದವರು ಎಸ್ಎಸ್ಎಲ್ಸಿಗೆ ಬರುತ್ತಾರೆ. ಇದರಿಂದ ವಯಸ್ಸಿಗೆ ತಕ್ಕಂತೆ ಆಯಾ ತರಗತಿಯಲ್ಲಿ ಮಕ್ಕಳು ವ್ಯಾಸಂಗ ಮಾಡದಿದ್ದರೆ, ಅವರ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಆಗುತ್ತದೆ. ಹಾಗಾಗಿ, ಸರ್ಕಾರ ಮುಂದಿನ ವರ್ಷದಿಂದ ಹೊಸ ಆದೇಶ ಹೊರಡಿಸುತ್ತಿದೆ. ಈ ವರ್ಷ ಇದು ಯಾವುದೇ ರೀತಿ ಅನ್ವಯ ಆಗೋದಿಲ್ಲ ಎಂದು ಹಂಚಾಟೆ, 2 ತಿಂಗಳು ರಜೆ ಮಜಾ ಕಳೆದ ಬಳಿಕ ಮಕ್ಕಳು ನಾಳೆಯಿಂದ ಶಾಲೆಯತ್ತ ಮುಖ ಮಾಡಲಿದ್ದು, ಶಿಕ್ಷಕರು ಮಕ್ಕಳನ್ನು ಸ್ವಾಗತಿಸಲು ಕೌತುಕರಾಗಿದ್ದಾರೆ ಎಂದರು.
ಶಾಲಾ ಶಿಕ್ಷಕರ ವೃಂದ (ETV Bharat) ಎಷ್ಟು ಶುಲ್ಕ ಪಡೆಯುತ್ತೀರಿ ಅನ್ನೋದನ್ನು ತಿಳಿಸಿ: ಡೋನೇಶನ್ ಹಾವಳಿ ಹೆಚ್ಚಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಷ್ಟು ಶುಲ್ಕ ಪಡೆಯುತ್ತಾರೆ ಎಂಬ ಬಗ್ಗೆ ಎಲ್ಲ ಶಾಲೆಗಳು ಅವರ ವೆಬ್ಸೈಟ್ ಮತ್ತು ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು ಮತ್ತು ಯಾವುದೇ ರೀತಿ ಡೋನೇಶನ್ ತೆಗೆದುಕೊಳ್ಳಬಾರದು ಎಂಬುದು ಸರ್ಕಾರದ ಆದೇಶ. ಆದರೆ, ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ನೀಡಲು, ಟ್ಯೂಶನ್ ಶುಲ್ಕ ಮತ್ತು ಸರ್ಕಾರ ನಿಗದಿಪಡಿಸಿದ ಶುಲ್ಕ ಮಾತ್ರ ಪಡೆಯಬೇಕು. ಅದನ್ನು ಬಿಟ್ಟು ಯಾರಾದ್ರೂ ಡೋನೇಶನ್ ಸ್ವೀಕರಿಸಿದರೆ ಅಂಥ ಶಾಲೆಗಳ ಮಾನ್ಯತೆ ರದ್ದುಪಡಿಸಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ:ನಾಳೆಯಿಂದ ಶಾಲೆಗಳು ಆರಂಭ; ಎಲ್ಲಾ ಸ್ಕೂಲ್ಗಳಿಗೂ ಪಠ್ಯ ಮತ್ತು ಸಮವಸ್ತ್ರ ವಿತರಣೆ : ಮಧು ಬಂಗಾರಪ್ಪ - Madhu Bangarappa