ಬೆಳಗಾವಿ:ಮಳೆ ಅಭಾವ, ಬರದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬರ ಪರಿಹಾರ ನೀಡದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಬಿರು ಬಿಸಿಲು ಲೆಕ್ಕಿಸದೇ ರಸ್ತೆ ತಡೆದು, ರಸ್ತೆ ಮೇಲೆ ಕುಳಿತು ಧರಣಿ ನಡೆಸಿದ ರೈತರು, ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಿತು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ನೂಕಾಟ-ತಳ್ಳಾಟವಾಯಿತು.
ಇದಕ್ಕೂ ಮೊದಲು ಮಾಧ್ಯಮಗಳ ಜತೆಗೆ ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ಬರಗಾಲ ನಿರ್ವಹಣೆಯಲ್ಲಿ ಎರಡೂ ಸರ್ಕಾರಗಳು ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿವೆ. ಒಂದಿಷ್ಟು ರೈತರಿಗೆ ಭಿಕ್ಷೆ ರೂಪದಲ್ಲಿ 2 ಸಾವಿರ ರೂ. ನೀಡಲಾಗಿದೆ. ಕುಡಿಯುವ ನೀರು, ಮೇವಿಗಾಗಿ ಜನ-ಜಾನುವಾರುಗಳು ಪರದಾಡುವ ಪರಿಸ್ಥಿತಿಯಿದೆ. ಜಿಲ್ಲಾಡಳಿತ ಕೂಡಲೇ ಸಾಲ ವಸೂಲಾತಿ ಪ್ರಕ್ರಿಯೆ ಕೈ ಬಿಡಬೇಕು. ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಲೋಕಸಭೆ ಚುನಾವಣೆಗೆ ಮತ ಕೇಳಲು ನಮ್ಮ ಮನೆಗೆ ಬಂದಾಗ ಕಳೆದ ಹತ್ತು ವರ್ಷದಲ್ಲಿ ನೀವು ಭರವಸೆ ಕೊಟ್ಟಂತೆ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತಂದಿಲ್ಲ. ರೈತರ ಆದಾಯ ದ್ವಿಗುಣಗೊಳಿಸಿಲ್ಲ ಎಂದು ಪ್ರಶ್ನಿಸುತ್ತೇವೆ ಎಂದರು.