ಚಾಮರಾಜನಗರ:ಹೆಜ್ಜೇನು ದಾಳಿಗೆ ರೈತನೋರ್ವ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಬೆಳತ್ತೂರು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಹನೂರು ತಾಲೂಕಿನ ಬೆಳತ್ತೂರು ಗ್ರಾಮದ ತುಳಸಿ ದಾಸ್ (52) ಮೃತಪಟ್ಟ ವ್ಯಕ್ತಿ. ಇವರ ಪತ್ನಿ ಆಶಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳತ್ತೂರು ಗ್ರಾಮದ ತುಳಸಿದಾಸ್ ಅವರು ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆಯ ನಡುವೆ ಬೆಳೆದಿದ್ದ ಕಳೆಗೆ ಕೀಟನಾಶಕ ಸಿಂಪಡಿಸುತ್ತಿದ್ದರು. ಈ ವೇಳೆ ಕೀಟನಾಶಕದ ದುರ್ವಾಸನೆಗೆ ತೆಂಗಿನ ಮರದಲ್ಲಿ ಕಟ್ಟಿದ್ದ ಹೆಜ್ಜೇನುಗಳು ದಂಪತಿ ಮೇಲೆ ಏಕಾಏಕಿ ದಾಳಿ ನಡೆಸಿವೆ.
ತೀವ್ರವಾಗಿ ಗಾಯಗೊಂಡಿದ್ದ ತುಳಸಿ ದಾಸ ಅವರನ್ನು ಸಮೀಪದ ಕಾಮಗೆರೆಯ ಹೋಲಿ ಕ್ರಾಸ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನು ಪತ್ನಿ ಆಶಾ ಅವರು ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಪ್ರತ್ಯೇಕ ಪ್ರಕರಣಗಳು:
ಹಣ ಕಳೆದುಕೊಂಡ ರೈತನ ಹೇಳಿಕೆ (ETV Bharat) 'ಹಣ ತೆಗೆದುಕೊಡಿ ಎಂದವನಿಗೆ ಪಂಗನಾಮ':ಎಟಿಎಂನಲ್ಲಿ ಹಣ ತೆಗೆದುಕೊಡಿ ಎಂದು ಸಹಾಯ ಕೇಳಿದ್ದ ರೈತನಿಗೆ 61 ಸಾವಿರ ರೂ. ವಂಚಿಸಿರುವ ಘಟನೆ ಹನೂರು ಪಟ್ಟಣದಲ್ಲಿ ನಡೆದಿದೆ.
ಹನೂರು ತಾಲೂಕಿನ ಕುರಟ್ಟಿಹೊಸೂರು ಗ್ರಾಮದ ರೈತ ಬಸವರಾಜು ಹಣ ಕಳೆದುಕೊಂಡ ರೈತ. ಈತ ಹನೂರು ಪಟ್ಟಣದ ಕೆನರಾ ಬ್ಯಾಂಕ್ನ ಎಟಿಎಂಗೆ ಆಗಮಿಸಿ ತನಗೆ ಹಣ ಪಡೆಯಲು ತಿಳಿದಿಲ್ಲ. ಹಣ ತೆಗೆದುಕೊಳ್ಳಲು ಸಹಾಯ ಮಾಡಿ ಎಂದು ಅಪರಿಚಿತ ವ್ಯಕ್ತಿ ಬಳಿ ಕೇಳಿದ್ದಾರೆ. ಅಪರಿಚಿತನು ರೈತ ಕೇಳಿದ 5000 ರೂ. ಹಣವನ್ನು ತೆಗೆದುಕೂಟ್ಟು ಬಳಿಕ ಕೋಡ್ ತಿಳಿದುಕೊಂಡು ಎಟಿಎಂ ಕಾರ್ಡ್ ಬದಲಿಸಿ, ಬಸವರಾಜು ಖಾತೆಯಿಂದ ಬರೋಬ್ಬರಿ 61,000 ರೂ. ಲಪಾಟಾಯಿಸಿದ್ದಾನೆ. ರೈತನಿಗೆ ಅಪರಿಚಿತ ವ್ಯಕ್ತಿ ಸಹಾಯ ಮಾಡಿ ನಂತರ ವಂಚಿಸಿ ಪರಾರಿಯಾದ ದೃಶ್ಯ ಎಟಿಎಂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಹಣ ಕಳೆದುಕೊಂಡ ರೈತ ಬಸವರಾಜು ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆಯಿಂದ ಪ್ರವಾಸಿಗರ ಪರದಾಟ:ಗಡಿಜಿಲ್ಲೆ ಚಾಮರಾಜನಗರದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ ಸೋಮವಾರ ಮಧ್ಯಾಹ್ನ ಕೂಡ ಭಾರೀ ಮಳೆಯಾಗಿದೆ.
ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭರ್ಜರಿ ಮಳೆಯಾದ ಕಾರಣ ದೇವಸ್ಥಾನಕ್ಕೆ ತೆರಳಲು ಚೆಕ್ ಪೋಸ್ಟ್ ಬಳಿ ಬಸ್ಗೆ ಕಾಯುತ್ತಿದ್ದ ನೂರಾರು ಮಂದಿ ಮಳೆಗೆ ಸಿಲುಕಿ ಪರದಾಡಿದರು. 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ಬೆಟ್ಟದ ಮೇಲಿಂದ ಮಳೆ ನೀರು ಹೊಳೆ ರೂಪದಲ್ಲಿ ಹರಿಯಿತು. ಅಕ್ಕಪಕ್ಕದ ರಸ್ತೆ ಬದಿ ಅಂಗಡಿಗಳಿಗೆ ನೀರು ನುಗ್ಗಿದವು. ಇನ್ನು ಬೆಟ್ಟದ ಭಾಗದಲ್ಲಿ ಜೋರು ಮಳೆಯಾದ್ದರಿಂದ ಹಂಗಳ ಹಿರಿಕೆರೆಗೆ ನೀರು ಹರಿದು ಬರುತ್ತಿದೆ.
ಇದನ್ನೂ ಓದಿ:ಉತ್ತಮ ಮಳೆ ; ಕಳಸ ದೇವಸ್ಥಾನದ ಮೆಟ್ಟಿಲು ಮೇಲೆ ಹರಿಯುತ್ತಿರುವ ನೀರು, ವಿವಿಧ ಭಾಗಗಳ ಸೇತುವೆಗಳು ಜಲಾವೃತ - heavy rainfall in chikkamagaluru