ಬೆಂಗಳೂರು:ನಗರ ಪೊಲೀಸ್ ಆಯುಕ್ತರ ಕಚೇರಿಗೆ ನಕಲಿ ಶಿಫಾರಸು ಪತ್ರ ನೀಡಿ ವಂಚಿಸಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಷನಲ್ ಕ್ರೈಂ ಇನ್ವೆಸ್ಟಿಗೇಷನ್ ಬ್ಯೂರೋ (ಎನ್‌ಸಿಐಬಿ) ಹೆಸರಿನಲ್ಲಿ ನಕಲಿ ಪತ್ರ ನೀಡಿ ವಂಚನೆಗೆ ಯತ್ನಿಸಿದ ಆರೋಪದ ಮೇರೆಗೆ ಉತ್ತರ ಪ್ರದೇಶ ಮೂಲದ ಸುರೇಶ್ ಕುಮಾರ್ ಶುಕ್ಲಾ (50) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಜೂನ್ 26ರಂದು ನ್ಯಾಷನಲ್ ಕೈಂ ಇನ್ವೆಸ್ಟಿಗೇಷನ್ ಬ್ಯೂರೋ ಹೆಸರಿನ ಪತ್ರ ಹಿಡಿದು ಬಂದ ಇಬ್ಬರು ಯುವಕರು, ಆಯುಕ್ತರ ಕಚೇರಿಗೆ ಸಲ್ಲಿಸಿದ್ದರು. ಪತ್ರದಲ್ಲಿ ಇಬ್ಬರು ಯುವಕರ ಹೆಸರು ಹಾಗೂ ಅವರನ್ನ ಕ್ರೈಂ ಇನ್‌ಫಾರ್ಮೇಷನ್ ಆಫೀಸರ್ಸ್ ಎಂದು ನಮೂದಿಸಲಾಗಿತ್ತು. ಹಾಗೂ ಇಬ್ಬರಿಗೂ ಸಹ ಬೆಂಗಳೂರಿನಲ್ಲಿ ಅಗತ್ಯ ಸಹಕಾರ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಪತ್ರದ ಬಗ್ಗೆ ಅನುಮಾನಗೊಂಡಿದ್ದ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಖಚಿತತೆ ಕುರಿತು ತನಿಖೆ ನಡೆಸುವಂತೆ ಸಿಸಿಬಿ ಪೊಲೀಸರಿಗೆ ಸೂಚಿಸಿದ್ದರು.
ಸಿಸಿಬಿ ಪೊಲೀಸರ ತನಿಖೆ ವೇಳೆ, NCIB ಹೆಸರಿನ ಕಚೇರಿ ಉತ್ತರಪ್ರದೇಶ ರಾಜ್ಯದ ಗೋಂಡಾ ಜಿಲ್ಲೆಯಲ್ಲಿರುವುದು ಹಾಗೂ ಸುರೇಶ್ ಕುಮಾರ್ ಶುಕ್ಲಾ ಎಂಬಾತ ಅದರ ಸಿಇಒ ಎಂಬುದು ಪತ್ತೆಯಾಗಿತ್ತು. ಹೆಚ್ಚಿನ ತನಿಖೆ ಕೈಗೊಂಡ ಸಿಸಿಬಿ ಪೊಲೀಸರಿಗೆ ಎನ್‌ಸಿಐಬಿ ಹೆಸರಿನ ಕಚೇರಿ 2012ರಲ್ಲಿ ಮೈಕ್ರೋ ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್ಪ್ರೈಸಸ್ ಹೆಸರಿನಲ್ಲಿ ಸಂಸ್ಥೆ ನೋಂದಣಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು.