ಬೆಂಗಳೂರು: ಆಸ್ತಿ ಕಬಳಿಸಲು ನಕಲಿ ದಾಖಲಾತಿ ಸೃಷ್ಟಿಸಿ ನ್ಯಾಯಾಲಯವನ್ನೇ ತಪ್ಪು ದಾರಿಗೆ ಎಳೆದಿದ್ದ ಭಾರಿ ವಂಚನೆ ಪ್ರಕರಣವನ್ನ ಸಿಐಡಿ ಪತ್ತೆ ಹಚ್ಚಿದೆ. ನಕಲಿ ದಾಖಲಾತಿ ಸೃಷ್ಟಿಸಿ ನ್ಯಾಯಾಲಯಕ್ಕೆ ಸ್ವಯಂಪ್ರೇರಿತವಾಗಿ ದಾವೆ ಸಲ್ಲಿಸಿ ನಕಲಿ ವಾದಿ - ಪ್ರತಿವಾದಿಗಳಿಂದ ವಾದ ಮಂಡಿಸಿ ಕೋರ್ಟ್ನಿಂದ ಆದೇಶ ಪಡೆದು ಅಮಾಯಕ ಮಾಲೀಕರ ಜಮೀನು ಹಾಗೂ ನಿವೇಶನಗಳನ್ನ ಕಬಳಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪದಡಿ 18 ಮಂದಿ ವಂಚಕರನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ತನಿಖೆ ವೇಳೆ ಇದೇ ಮಾದರಿಯಲ್ಲಿ ರಾಜಧಾನಿಯಲ್ಲಿ 116 ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನ ಪತ್ತೆ ಹಚ್ಚಿದ್ದಾರೆ. ವಿವಾದಿತ ಅಥವಾ ಖಾಲಿಯಿರುವ ಜಮೀನು ಹಾಗೂ ನಿವೇಶನಗಳನ್ನ ಗುರಿಯಾಗಿಸಿಕೊಳ್ಳುವ ವಂಚಕರ ಗ್ಯಾಂಗ್, ಸಮಗ್ರ ದಾಖಲಾತಿ ಸಂಗ್ರಹಿಸಿ ಜಮೀನಿಗೆ ಸಂಬಂಧಿಸಿದ ನಕಲಿ ದಾಖಲಾತಿಗಳನ್ನ ಸೃಷ್ಟಿಸುವುದಲ್ಲದೇ, ಮಾಲೀಕ ಹಾಗೂ ಬಾಡಿಗೆದಾರರನ್ನ ಕ್ರಿಯೇಟ್ ಮಾಡಿ ಅವರ ನಡುವೆ ವಿವಾದವಿದೆ ಎಂಬಂತೆ ಪ್ರತಿಬಿಂಬಿಸಿ ಕೋರ್ಟ್ಗೆ ಮೊರೆ ಹೋಗಿ, ಅಲ್ಲಿಯೂ ಸಹ ವಾದಿ - ಪ್ರತಿವಾದಿಗಳ ಪರ ಆರೋಪಿಗಳು ವಾದ ಮಂಡಿಸಿ ನ್ಯಾಯಾಲಯದಿಂದ ರಾಜಿ ಸಂಧಾನ ಮಾಡಿಸಿ ಆದೇಶ ಪತ್ರ ಪಡೆಯುತ್ತಿದ್ದರು.
ಆದೇಶ ಪತ್ರವನ್ನ ಅಸಲಿ ಮಾಲೀಕರಿಗೆ ತೋರಿಸಿ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 18 ಮಂದಿ ವಂಚಕರನ್ನ ಬಂಧಿಸಲಾಗಿದೆ. ಬಂಧಿತರ ಪೈಕಿ ಕೆಲವರು ಜೈಲಿಗೆ ಹೋಗಿ ಜಾಮೀನು ಪಡೆದು ಹೊರಗಿದ್ದಾರೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಬಿ. ಮಣಿ (ನಕಲಿ ಮಾಲೀಕ), ಅರುಣ್ (ನಕಲಿ ಬಾಡಿಗೆದಾರ) ಸೆಂದಿಲ್ ಕುಮಾರ್, ಜಾನ್ ಮೋಸಸ್, ಅಂಥೋಣಿರಾಜ್, ನರೇಂದ್ರ ಕುಮಾರ್, ಎಡ್ವಿನ್, ಕಾಂತಮ್ಮ ಸೇರಿ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಂಚನೆ ಎಸಗಿದ್ದು ಯಾವಾಗ?ಯಶವಂತಪುರ ವಿಲೇಜ್ ಬಳಿ ಗೋಕುಲ 1ನೇ ಹಂತದಲ್ಲಿರುವ ರವಿಂದ್ರ ಸಿ.ಷಾ ಅವರಿಗೆ ಸೇರಿದ 100/56 ಅಡಿ ಉದ್ದಳತೆ ಸ್ವತ್ವನ್ನ ಅಕ್ರಮವಾಗಿ ಲಪಟಾಯಿಸುವ ದುರುದ್ದೇಶದಿಂದ 2020ರಲ್ಲಿ ಸಂಚು ರೂಪಿಸಿ ವಂಚಕ ಜಾನ್ ಮೋಸಸ್ ತಂಡ ಕಟ್ಟಿಕೊಂಡಿದ್ದ. ಸ್ವತ್ತಿಗೆ ಮಾಲೀಕರಾಗಿ ಮಣಿ, ಬಾಡಿಗೆದಾರನಾಗಿ ಅರುಣ್, ಜಿಪಿಎ ಹೋಲ್ಡರ್ ಆಗಿ ಸೆಂದಿಲ್ ಕುಮಾರ್ ಹೆಸರಲ್ಲಿ ಜಾಗಕ್ಕೆ ಬೇಕಾದ ಎಲ್ಲ ರೀತಿಯ ನಕಲಿ ದಾಖಲಾತಿ ಸೃಷ್ಟಿಸಿದ್ದ. ಬಾಡಿಗೆ ಕರಾರು ಪತ್ರ, ಬಿಬಿಎಂಪಿ ಖಾತಾ ಪ್ರಮಾಣಪತ್ರ ಹಾಗೂ ಲೀಗಲ್ ನೋಟಿಸ್ ಸೇರಿದಂತೆ ನಕಲಿ ದಾಖಲಾತಿಗಳನ್ನ ಸೃಷ್ಟಿಸಿದ್ದ. ಆರೋಪಿಗಳಿಂದ ನಕಲಿ ಸಹಿ ಮಾಡಿಸಿ ನೈಜವೆಂದು ಬಿಂಬಿಸಿ ಲಘು ವ್ಯವಹಾರಗಳ ನ್ಯಾಯಾಲಯಕ್ಕೆ ವಕೀಲರ ಮುಖಾಂತರ ದಾವೆ ಜಾನ್ ಮೋಸಸ್ ಸಲ್ಲಿಸಿದ್ದ.
ನಕಲಿ ಸ್ವತ್ತನ್ನ ಖಾಲಿ ಮಾಡಿಸುವ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಬಳಿಕ ವಾದಿ - ಪ್ರತಿವಾದಿಗಳ ನಡುವೆ ರಾಜಿ ಸಂಧಾನ ಮಾಡಿಸುವ ರೀತಿ ಕೋರ್ಟ್ನಲ್ಲಿ ಆದೇಶ ಪಡೆದಿದ್ದ. ಬಳಿಕ ನ್ಯಾಯಾಲಯ ಆದೇಶ ಮೇರೆಗೆ ಸ್ವತ್ತಿನಲ್ಲಿದ್ದವರನ್ನ ಖಾಲಿ ಮಾಡಿಸಿ ಅಕ್ರಮವಾಗಿ ಸ್ವತ್ತುಗಳನ್ನ ತಮ್ಮ ವಶಕ್ಕೆ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಅಸಲಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ವಾದ ಆಲಿಸಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ನಗರ ಪೊಲೀಸರಿಗೆ 2020ರಲ್ಲಿ ನಿರ್ದೇಶನ ನೀಡಿತ್ತು. ಸಮಗ್ರ ತನಿಖೆಗಾಗಿ ನಗರ ಪೊಲೀಸ್ ಇಲಾಖೆಯು ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು.