ಬೆಂಗಳೂರು: ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಜೆಡಿಎಸ್ ವರಿಷ್ಠರು ಸರಣಿ ಸಭೆ ನಡೆಸುತ್ತಿದ್ದಾರೆ. ಮುಂದುವರೆದ ಭಾಗವಾಗಿ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಂದು ಕುಣಿಗಲ್ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆ ನಡೆಸಿದ್ದಾರೆ. ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಈ ಎರಡು ಕ್ಷೇತ್ರಗಳ ಮುಖಂಡರ ಜೊತೆ ಗೌಡರು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಡಾ. ಸಿ.ಎನ್.ಮಂಜುನಾಥ್ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಮುಖಂಡರ ಜೊತೆ ದೇವೇಗೌಡರು, ಮಂಜುನಾಥ್ ಗೆಲುವಿಗೆ ಜೆಡಿಎಸ್‌ನ ನಾಯಕರು, ಕಾರ್ಯಕರ್ತರು ಕೆಲಸ ಮಾಡಬೇಕು, ಚುನಾವಣೆ ಮುಗಿಯುವವರೆಗೆ ಅವಿರತವಾಗಿ ಶ್ರಮಿಸಿ ಮಂಜುನಾಥ್ ಅವರನ್ನು ಗೆಲ್ಲಿಸಬೇಕು ಎಂಬ ಸೂಚನೆಯನ್ನು ಮುಖಂಡರಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಂಜುನಾಥ್ ಅವರ ಗೆಲುವಿಗೆ ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ಕೂಡ ನಡೆಸಿದ ಅವರು, ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಸಮನ್ವಯ ಸಾಧಿಸಿ ಮೈತ್ರಿಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಪಕ್ಷದ ಮುಖಂಡರಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ನಾಳೆಯೂ ಸಭೆ ಮುಂದುವರಿಯಲಿದ್ದು, ರಾಮನಗರ ಕ್ಷೇತ್ರದ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ. ಕಾಂಗ್ರೆಸ್‌ನಿಂದ ಸಂಸದ ಡಿ.ಕೆ.ಸುರೇಶ್ ಕಣಕ್ಕಿಳಿಯುವುದರಿಂದ ಅವರನ್ನು ಮಣಿಸಲು ಜೆಡಿಎಸ್ - ಬಿಜೆಪಿ ಜಂಟಿಯಾಗಿ ರಣತಂತ್ರ ರೂಪಿಸುವಲ್ಲಿ ನಿರಂತರವಾಗಿದೆ. ಈ ನಿಟ್ಟಿನಲ್ಲಿ ದೇವೇಗೌಡರು ಸಹ ನಿರಂತರವಾಗಿ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ.