ಶಿವಮೊಗ್ಗ:ಮಾಜಿ ಸಚಿವ ಬಿ ಸಿ ಪಾಟೀಲ್ ಅವರ ಮಗಳ ಗಂಡ ಪ್ರತಾಪ್ ಇಂದು ಮಧ್ಯಾಹ್ನ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಕೆರೆ ಗ್ರಾಮದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಿ ಸಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಾಪ್ ನನ್ನ ಅಳಿಯ. 2016ರಲ್ಲಿ ನನ್ನ ಮಗಳ ಮದುವೆ ಆಗಿದ್ದರು. ಇವರದು ಚನ್ನಗಿರಿ ತಾಲೂಕು ಕತ್ತಲಗೆರೆ ಗ್ರಾಮ. ನನ್ನ ಹಿರಿಯ ಮಗಳ ಸೌಮ್ಯ ಅವರನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದೆವು. ನಮ್ಮ ಜೊತೆಗೆ ಇದ್ದರು. ಇವರು ನಮ್ಮ ಎಲ್ಲ ವ್ಯವಹಾರವನ್ನು ನೋಡಿಕೊಂಡು ಹೋಗುತ್ತಿದ್ದರು.
ಇಂದು ಬೆಳಗ್ಗೆ ಕತ್ತಲಗೆರೆಗೆ ಹೋಗಿ ಬರುವುದಾಗಿ ಹೇಳಿದ್ರು, ಆಯ್ತು ಎಂದು ಹೇಳಿ ಕಳುಹಿಸಿದ್ದೆ. ಮಧ್ಯಾಹ್ನ 1:45 ಕ್ಕೆ ಪ್ರತಾಪ್ ಅಣ್ಣ ಪ್ರಭು ನನಗೆ ಪೋನ್ ಮಾಡಿದ್ರು, ಪ್ರತಾಪ್ ಎಲ್ಲಿದ್ದಾನೆ, ಸಿಕ್ಕಿದ್ನಾ ಎಂದು ಕೇಳಿದ್ರು. ಇಲ್ಲ ಊರಿಗೆ ಹೋಗುವುದಾಗಿ ಹೇಳಿ ಹೋಗಿದ್ರು ಎಂದೆ. ಅದಕ್ಕೆ ಪ್ರಭು ಅವರು ಇಲ್ಲ ಪ್ರತಾಪ್ ಗುಳಿಗೆ ತೆಗೆದುಕೊಂಡಿದ್ದಾನೆ. ಫೋನ್ ಸಿಕ್ತಿಲ್ಲ, ನೀವು ಟ್ರಾಕ್ ಮಾಡಿಸಿ ಎಂದು ಹೇಳಿದರು.
ನಾನು ಪೋನ್ ಮಾಡಿದಾಗ ರೀಚ್ ಆಗಲಿಲ್ಲ. ಆ ಮೇಲೆ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಅವರಿಗೆ ಫೋನ್ ಮಾಡಿ ಹೇಳಿದ್ದೆ. ಅವರಿಗೆ ಫೋನ್ ನಂಬರ್ ನೀಡಿದೆ. ಆ ಮೇಲೆ ಹೂನ್ನಾಳಿ ಸಬ್ ಡಿವಿಜನ್ ಹಾಗೂ ಶಿವಮೊಗ್ಗ ಎಸ್ಪಿ ಅವರಿಗೆ ಹೇಳಿದೆ. ನಂತರ ಲೊಕೇಷನ್ ನ್ಯಾಮತಿ ಬಳಿ ಇರುವುದಾಗಿ ಹೇಳಿದ್ರು. ನಾನು ಫೋನ್ ಮಾಡಿದಾಗ ಪೋನ್ ಸಿಕ್ತು. ಆಗ ಅವರು ಫುಲ್ ವಾಂತಿ ಮಾಡಿಕೊಳ್ಳುತ್ತಿದ್ದರು. ಎಲ್ಲಿದ್ದಿಯಾ ಅಂತ ಕೇಳ್ದೆ. ಅವರು ನಾನು ಹೊನ್ನಾಳಿ- ಮಲೆಬೆನ್ನೂರು ರಸ್ತೆಯಲ್ಲಿ ಇದ್ದೇನೆ ಎಂದು ಹೇಳಿದ್ರು.
ನಂತರ ಎಲ್ಲರಿಗೂ ತಿಳಿಸಿದೆ. ಅಷ್ಟರಲ್ಲಿ ಅವರ ಸಹೋದರ ಪ್ರಭು ಹೊನ್ನಾಳಿ ಆಸ್ಪತ್ರೆಗೆ ಸೇರಿಸಿದ್ದರು. ಆಗ ನಾನು ಡಾಕ್ಟರ್ ಹತ್ತಿರ ಮಾತನಾಡಿದಾಗ, ಅವರು ಜೋಳಕ್ಕೆ ಸಿಂಪಡಿಸುವ ಔಷಧವನ್ನು ಸೇವಿಸಿದ್ದಾರೆ, ಬಹಳ ಗಂಭೀರವಾದ ಸ್ಥಿತಿಯಲ್ಲಿದ್ದಾರೆ ಎಂದರು.
ಆಗ ನಿಮ್ಮಲ್ಲಿ ಆಗದೇ ಹೋದ್ರೆ ಅಲ್ಲಿಂದ ಶಿಫ್ಟ್ ಮಾಡಿಸಿ ಎಂದೆ. ನಾನು ದಾವಣಗೆರೆಗೆ ಶಿಫ್ಟ್ ಮಾಡಿ ಎಂದೆ. ಅದಕ್ಕೆ ಪ್ರಭು ದಾವಣಗೆರೆ ದೂರ ಆಗುತ್ತದೆ ಎಂದು ಶಿವಮೊಗ್ಗಕ್ಕೆ ಶಿಫ್ಟ್ ಮಾಡಿದರು. ನಾನು ಶಿಕಾರಿಪುರದ ಬಳಿ ಬರುವಷ್ಟರಲ್ಲಿ ಪ್ರತಾಪ್ ತೀರಿ ಹೋಗಿದ್ದಾರೆ ಎಂದರು. ಪ್ರತಾಪ್ಗೆ ಮಕ್ಕಳಾಗಿಲ್ಲ ಎಂದು ಕೊರಗಿತ್ತು. ಇದಕ್ಕೆ ಸರೋಗಸಿ ಮಾಡಿಸಲು ಬೆಂಗಳೂರಿನಲ್ಲಿ ಲಾಯರ್ ಅನ್ನು ಸಹ ಭೇಟಿ ಮಾಡಿ ಮಾತನಾಡಿದ್ದೆ. ನನ್ನೊಂದಿಗೆ ಮಾತನಾಡಿದರು ಹಾಗೂ ನನ್ನ ಮಗಳ ಬಳಿ ಸಹ ಮಾತನಾಡಿದರು. ನೀವು ಕೋರ್ಟ್ಗೆ ಬಂದು ಹೇಳಬೇಕಾಗುತ್ತದೆ ಎಂದರು. ಆಯ್ತು ಎಂದು ಹೇಳಿದ್ವಿ. ಇದಕ್ಕಾಗಿ ಕೋರ್ಟ್ ಅನುಮತಿಗಾಗಿ ಕಾಯುತ್ತಿದ್ದೆವು. ಆದರೆ, ಆತ ಕುಡಿತದ ದಾಸನಾಗಿದ್ದ. ನಾಳೆ ಅವರ ಸ್ವಗ್ರಾಮ ಚನ್ನಗಿರಿ ತಾಲೂಕು ಕತ್ತಲಗೆರೆಯಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಹೇಳಿದರು.