ಕರ್ನಾಟಕ

karnataka

ETV Bharat / state

ಪಕ್ಷದ ಚೌಕಟ್ಟಿನಲ್ಲಿ ಇರಬೇಕು, ಒಗ್ಗಟ್ಟು ಶಿಸ್ತು ಕಾಪಾಡಿಕೊಳ್ಳುವುದು ಎಲ್ಲರಿಗೂ ಅನ್ವಯ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿರುವ ಕುರಿತು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.

ಡಾ.ಸಿ.ಎನ್.ಅಶ್ವತ್ಥನಾರಾಯಣ ಯತ್ನಾಳಗೆ ನೋಟಿಸ್ Show cause notice
ಡಾ.ಸಿ.ಎನ್.ಅಶ್ವತ್ಥನಾರಾಯಣ (ETV Bharat)

By ETV Bharat Karnataka Team

Published : 4 hours ago

ಬೆಂಗಳೂರು:ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ವರಿಷ್ಠರು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಸಂಬಂಧಪಟ್ಟವರು ನೋಟಿಸ್‌ಗೆ ಉತ್ತರ ಕೊಡಲಿದ್ದಾರೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲರೂ ಪಕ್ಷದ ಚೌಕಟ್ಟಿನಲ್ಲಿ ಇರಬೇಕಾಗುತ್ತದೆ. ಒಗ್ಗಟ್ಟು, ಶಿಸ್ತು ಕಾಪಾಡಿಕೊಳ್ಳುವುದು ಎಲ್ಲರಿಗೂ ಅನ್ವಯ ಆಗುತ್ತದೆ ಎಂದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಿಜವಾದ ಕಾನೂನು ಪಾಲಕರಾಗಿದ್ದರೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಕಾಂಗ್ರೆಸ್‌ನಲ್ಲಿ ಸಿಎಂ, ಡಿಸಿಎಂ, ಅವರ ಪಕ್ಷದ ಪದಾಧಿಕಾರಿಗಳಿಗೆ ಕಾನೂನು ಯಾವುದೋ ಒಂದು ಸಂದರ್ಭದಲ್ಲಿ ನೆನಪಾಗುತ್ತದೆ. ಅದಕ್ಕಾಗಿ ಮನಬಂದಂತೆ, ಇಷ್ಟ ಬಂದಂತೆ ಸಿಎಂ, ಡಿಸಿಎಂ ಮಾತನಾಡುತ್ತಾರೆ. ಇವರೇ ಈ ರೀತಿ ಮಾತನಾಡಿದರೆ ಇವರ ಕೆಳಗಿರುವವರು ಇನ್ನು ಹೇಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನೂ ಇವರಿಗೆ ವಕ್ಫ್ ವಿಚಾರದಲ್ಲಿ ಬಾಯಿ ಇಲ್ಲ. ಚಂದ್ರಶೇಖರ ಸ್ವಾಮೀಜಿಗಳು ಇಡೀ ಸಮುದಾಯಕ್ಕೆ ಆಗಿರುವ ಅನ್ಯಾಯ ಕುರಿತು ಹೇಳಿದರು. ನಿಮ್ಮ ಓಲೈಕೆ ರಾಜಕಾರಣ ಕಂಡು ಮಾತನಾಡಿದರು. ಮಾರನೇ ದಿನ ವಿಷಾದ ವ್ಯಕ್ತಪಡಿಸಿದ್ದರು. ಆದರೆ ನೀವು ಪಾಕಿಸ್ತಾನ ಜಿಂದಾಬಾದ್ ಹೇಳಿಕೆಗೆ ನಿಮ್ಮ ಸಂಸದರ ವಿರುದ್ಧ ಕ್ರಮ ತೆಗೆದುಕೊಂಡ್ರಾ? ಕಾನೂನು ಎಲ್ಲರಿಗೂ ಒಂದೇ ಎಂದು ಹೇಳುತ್ತೀರಾ? ನೀವು ನಿಜವಾದ ಕಾನೂನು ಪಾಲಕರೇ ಆಗಿದ್ದರೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದರು.

ಸ್ವಾಮೀಜಿಗಳ ಮೇಲೆ ಕೇಸ್ ಹಾಕಿದೀರಿ, ಬನ್ನಿ ಹೇಳಿಕೆ ತಗೊಳ್ಳಿ ಎಂದಿದ್ದಾರೆ. ಸರ್ಕಾರದ ನಡೆಯನ್ನು ಜನ ಒಪ್ಪುವುದಿಲ್ಲ. ಹೋಗಿ ಮಠದಲ್ಲೇ ಉತ್ತರ ಪಡೆದುಕೊಳ್ಳಿ. ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಹಿಂದೆ ಒಕ್ಕಲಿಗ ಸಮಾವೇಶದಲ್ಲಿ ಪೆನ್ನು ಪೇಪರ್ ಕೊಡಿ ಎಂದು ಹೇಳಿದ್ದಿರಿ. ಈಗ ಏನಾಯ್ತು? ನಿಮ್ಮ ಬೆದರಿಕೆಗೆ ಸಮಾಜ ಹೆದರಲ್ಲ, ಕಾನೂನು ಪಾಲನೆ ಏನು ಅಂತ ನಮಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯತ್ನಾಳಗೆ ಶೋಕಾಸ್ ನೋಟಿಸ್: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ. ಈ ಕುರಿತು ಯತ್ನಾಳ ಪ್ರತಿಕ್ರಿಯೆ ನೀಡಿ, 'ನೋಟಿಸ್​ಗೆ ಉತ್ತರಿಸುವುದರ ಜೊತೆ ರಾಜ್ಯ ಬಿಜೆಪಿಯಲ್ಲಿನ ವಸ್ತುಸ್ಥಿತಿ ಬಗ್ಗೆಯೂ ವಿವರಿಸುತ್ತೇನೆ. ಹಾಗೆಯೇ ಹಿಂದುತ್ವ, ಭ್ರಷ್ಟಾಚಾರ, ವಕ್ಪ್ ವಿಚಾರ, ಕುಟುಂಬ ರಾಜಕಾರಣದ ಬಗೆಗಿನ ನನ್ನ ಹೋರಾಟ ಮುಂದುವರಿಯುತ್ತದೆ' ಎಂದಿದ್ದಾರೆ.

ಇದನ್ನೂ ಓದಿ: ಯತ್ನಾಳ್​​​ಗೆ ಶೋಕಾಸ್ ನೋಟಿಸ್: 10 ದಿನಗಳೊಳಗೆ ಉತ್ತರಿಸುವಂತೆ ಹೈಕಮಾಂಡ್ ಸೂಚನೆ: ಹೋರಾಟ ಮುಂದುವರೆಯುತ್ತೆ ಎಂದ ಬಸನಗೌಡ

ABOUT THE AUTHOR

...view details