ಶಿವಮೊಗ್ಗ:ಯಡಿಯೂರಪ್ಪನವರು ನನಗೆ ಅನ್ಯಾಯ, ಮೋಸ ಮಾಡುತ್ತಿದ್ದಾರೆ ಎಂದು ಬಹಳ ಜನ ನೋವು ತೋಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ನೋವು ಅನುಭವಿಸುತ್ತಿರುವರ ಧ್ವನಿಯಾಗಬೇಕಲ್ಲವೆ? ಆ ಬಗ್ಗೆ ನಾವು ಚಿಂತನೆ ಮಾಡಬೇಕು. ಎಲ್ಲವನ್ನು ನಾನು ಈಗಲೇ ಹೇಳಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ರಾಧಮೋಹನ ಅಗರವಾಲ್ ನನಗೆ ಫೋನ್ ಮಾಡಿ ಕಾಂತೇಶನಿಗೆ ವಿಧಾನ ಪರಿಷತ್ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಇದರಿಂದ ನಾನು ಮಾತುಕತೆ ನಡೆಸಿ ಎಲ್ಲವನ್ನು ತಿಳಿಸುತ್ತೇನೆ ಎಂದರು.
ಟಿಕೆಟ್ ಕೈತಪ್ಪುವಲ್ಲಿ ಜಾತಿ ಕಾರಣ ಇದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಎಂದೂ ಜಾತಿ ನಾಯಕನಾಗಲಿಲ್ಲ. ಅದು ನನಗೆ ಹೆಮ್ಮೆ. ಹಿಂದೂತ್ವದ ವಿಚಾರದ ಪ್ರತಿಪಾದನೆ ಮಾಡಿರುವುದು ನನಗೆ ಹೆಮ್ಮೆ. ಆದರೆ, ಇದು ಅನ್ಯಾಯ ಆಗಿದೆ ಅಂತ ನನಗೆ ಈವರೆಗೂ ಅನ್ನಿಸಿಲ್ಲ. ಇದರಿಂದ ನಾನು ಚರ್ಚೆ ಮಾಡುತ್ತೇನೆ ಎಂದರು.
ಯಡಿಯೂರಪ್ಪ ಮತ್ತೆ ಸಿಗಲ್ಲವೆಂದು ತಪ್ಪು ತಿದ್ದಲು ಹೋದೆ:ಬಿಎಸ್ವೈ ಮತ್ತು ನಾನು ಒಂದೇ ತಟ್ಟೆಯಲ್ಲಿ ಊಟ ಮಾಡಿದವರು. ಹಾಗಾಗಿ, ಈ ಸಲುಗೆಯಿಂದ ಇಂತಿಂತಹ ತಪ್ಪುಗಳನ್ನು ನೀವು ಮಾಡುತ್ತಿದ್ದೀರು ಅಂತ ಅವರ ಕೆಲವು ದೋಷಗಳನ್ನು ನಾನು ನೇರವಾಗಿ ಹೇಳಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಕಾರಣ ನಮಗೆ ಮತ್ತೊಬ್ಬ ಯಡಿಯೂರಪ್ಪನವರು ಸಿಗಲ್ಲ ಎಂದು ಹಲವು ಸಲ ಹೇಳಿದೆ. ಅವರ ಬಗ್ಗೆ ಬಂದ ಆರೋಪ ನನಗೆ ಇಷ್ಟವಾಗುತ್ತಿರಲ್ಲಿಲ್ಲ. ನಾನು ಅದೇ ರೀತಿ ಮೂರ್ನಾಲ್ಕು ಸಲ ಅವರಿಗೆ ಹೇಳಿದಾಗ ಅವರು, ಇದು ನನ್ನ ವೈಯಕ್ತಿಕವಾದ ವಿಚಾರ, ಯಾರೂ ತಲೆ ಹಾಕಬೇಡಿ ಎಂದರು. ಇದರಿಂದ ನಾನು ಹಿಂದೆ ಸರಿದುಕೊಂಡೆ. ಬಳಿಕ ಅವರು ಕೆಜೆಪಿಗೆ ಹೋಗಿದ್ದರು. ಆದರೆ, ನಾನು ಹೋಗಲಿಲ್ಲ. ಇದೆಲ್ಲ ಹಳೆ ವಿಚಾರ ಇರಬಹುದು. ಪಕ್ಷದ ಪರವಾಗಿ ನಿಷ್ಠೆ ಹೊಂದಿದ ನಾನು, ವ್ಯಕ್ತಿ ಪರವಾಗಿ ಹೋಗಲಿಲ್ಲ. ಇದರಿಂದ ಅವರಿಗೆ ಬೇಸರವಾಗಿರಬಹುದು ಎಂದು ಹಳೆ ವಿಚಾರಗಳನ್ನು ಪ್ರಸ್ತಾಪಿಸಿದರು.