ಶಿರಸಿ (ಉತ್ತರ ಕನ್ನಡ):ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಕನ್ನಡದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಇಡೀ ರಾಷ್ಟ್ರವೇ ಆತಂಕದಲ್ಲಿದೆ. ರಾಜ್ಯವನ್ನು ಸರ್ವನಾಶ ಮಾಡಲು ಕಾಂಗ್ರೆಸ್ ಪಕ್ಷ ಹವಣಿಸುತ್ತಿದೆ ಎಂದು ಆರೋಪಿಸಿದರು.
''ರಾಜ್ಯದ ಒಬ್ಬ ಹೆಣ್ಣು ಮಗುವಿಗೆ ಏನಾಯಿತು ಎಂದು ಇಡೀ ರಾಷ್ಟ್ರವು ಚಿಂತಿತವಾಗಿದೆ. ಪೋಷಕರು ರಾಜ್ಯದಲ್ಲಿ ತಮ್ಮ ಹೆಣ್ಣುಮಕ್ಕಳು ಸುರಕ್ಷಿತವೇ ಎಂಬ ಬಗ್ಗೆ ಆತಂಕಿತರಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಮಾಡಿದ ಪಾಪಗಳೇ ಕಾರಣ. ಕಾಲೇಜು ಕ್ಯಾಂಪಸ್ ನಲ್ಲಿ ಯಾರನ್ನಾದರೂ ಕೊಲ್ಲುವ ಧೈರ್ಯವನ್ನು ಯಾರಾದರೂ ಹೇಗೆ ಮಾಡಬಹುದು?. ವೋಟ್ ಬ್ಯಾಂಕ್ಗಾಗಿ ಕೆಲವೇ ದಿನಗಳಲ್ಲಿ ತಮ್ಮನ್ನು ರಕ್ಷಿಸುತ್ತಾರೆ ಎಂದು ಅಪರಾಧ ಮಾಡಿದವರಿಗೆ ತಿಳಿದಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ನಾಶ ಮಾಡುವಲ್ಲಿ ನಿರತವಾಗಿದೆ. ಅಪರಾಧಗಳನ್ನು ನಿಯಂತ್ರಿಸುವ ಬದಲು ಕಾಂಗ್ರೆಸ್ ಸಮಾಜ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಮನಸ್ಥಿತಿಯನ್ನು ಉತ್ತೇಜಿಸುತ್ತಿದೆ'' ಎಂದು ಹರಿಹಾಯ್ದರು.
''ರಾಮಮಂದಿರದ ಟ್ರಸ್ಟಿಗಳು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಒಡ್ಡಿದ ಎಲ್ಲಾ ಅಡೆತಡೆಗಳನ್ನು ನಿರ್ಲಕ್ಷಿಸಿ, ಅವರ ಮನೆಗಳಿಗೆ ತೆರಳಿ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು. ಆದರೆ ಅವರು ಆಹ್ವಾನವನ್ನು ತಿರಸ್ಕರಿಸಿದರು. ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆಯ ಆಹ್ವಾನವನ್ನು ತಿರಸ್ಕರಿಸಿದವರನ್ನು ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಜನ ತಿರಸ್ಕರಿಸುತ್ತಾರೆ'' ಎಂದು ಹೇಳಿದರು.