ಕರ್ನಾಟಕ

karnataka

ETV Bharat / state

ಸಾಂಪ್ರದಾಯಿಕ ಕೃಷಿಗೆ ಫುಲ್‌ಸ್ಟಾಪ್; ರೈತನ ಕೈ ಹಿಡಿದ ಡ್ರ್ಯಾಗನ್‌ ಫ್ರೂಟ್ಸ್‌ - Dragon Fruit Farming

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಸೋಮಶೇಖರ್ ಎಂಬ ರೈತ ಡ್ರ್ಯಾಗನ್‌ ಫ್ರೂಟ್ಸ್‌ ಬೆಳೆದು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಸೇಬನ್ನೂ ಬೆಳೆಯುತ್ತಿರುವುದು ವಿಶೇಷ.

Dragon fruit brought profit to farmers Somashekhar of Heggadagere village
ಡ್ರ್ಯಾಗನ್‌ ಫ್ರೂಟ್ ಬೆಳೆದ ರೈತ ಸೋಮಶೇಖರ್ (ETV Bharat)

By ETV Bharat Karnataka Team

Published : Jul 1, 2024, 8:18 AM IST

Updated : Jul 1, 2024, 8:34 AM IST

ರಾಮನಗರ: ಸಾಂಪ್ರದಾಯಿಕ ಕೃಷಿಯಿಂದ ವಿಮುಖರಾಗಿ ರೈತರೊಬ್ಬರು ತೋಟಗಾರಿಕೆ ಬೆಳೆಯಾದ ಡ್ರ್ಯಾಗನ್‌ ಫ್ರೂಟ್ಸ್‌ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ಬಿಡದಿ ಹೋಬಳಿಯ ಹೆಗ್ಗಡಗೆರೆ ಗ್ರಾಮದ ಸೋಮಶೇಖರ್ ಎಂಬವರೇ ಡ್ರ್ಯಾಗನ್‌ ಫ್ರೂಟ್ಸ್‌ ಬೆಳೆದು ಯಶಸ್ಸು ಕಾಣುತ್ತಿರುವ ಕೃಷಿಕ.

ಡ್ರ್ಯಾಗನ್‌ ಫ್ರೂಟ್ಸ್‌ ತೋಟ (ETV Bharat)

ಇವರು 2021ರಲ್ಲಿ ಗುಜರಾತ್‌ನಿಂದ 500 ಡ್ರ್ಯಾಗನ್‌ ಸಸಿಗಳನ್ನು ತಂದು ತಮ್ಮ ಒಂದು ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದರು. ಗಿಡ ನೆಟ್ಟಗೆ ನಿಂತು ಹರಡಿಕೊಳ್ಳಲು ಕಲ್ಲಿನ ಕಂಬ ಹಾಕಿದ್ದಾರೆ. ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಸಂಪೂರ್ಣ ಸಾವಯವ ಗೊಬ್ಬರ ಬಳಸಿ ಕೃಷಿಯಲ್ಲಿ ತೊಡಗಿದ್ದಾರೆ.

ಒಂದು ಗಿಡಕ್ಕೆ ಕನಿಷ್ಠ 600 ರೂ.ಗಿಂತ ಅಧಿಕ ಖರ್ಚು ಮಾಡಿದ್ದಾರೆ. ಒಟ್ಟಾರೆ 5 ರಿಂದ 6 ಲಕ್ಷ ರೂ. ಬಂಡವಾಳ ಹಾಕಿದ್ದಾರೆ. ಇದೀಗ ಬೆಳೆ ಕೈ ಸೇರುತ್ತಿದೆ. ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕೆಜಿಗೆ 150 ರೂ. ಬೆಲೆ ನಿರೀಕ್ಷಿಸಿದ್ದು ಮಾರುಕಟ್ಟೆಯಲ್ಲಿ ಕೆಜಿಗೆ 110 ರೂ. ಸಿಗುತ್ತಿದೆ.

ಒಣ ಭೂಮಿ ಪೂರಕ:ಕಡಿಮೆ ತೇವಾಂಶವಿರುವ ಬಯಲು ಸೀಮೆಯಲ್ಲೂ ಡ್ರ್ಯಾಗನ್‌ ಹಣ್ಣು ಬೆಳೆಯಬಹುದು ಎಂಬುದನ್ನು ಸೋಮಶೇಖರ್ ತೋರಿಸಿಕೊಟ್ಟಿದ್ದಾರೆ. ಹೆಚ್ಚು ಶೀತ ಅಥವಾ ಜವುಳು ಭೂಮಿ ಇದ್ದರೆ ಇಳುವರಿ ಕಡಿಮೆ. ಕಡಿಮೆ ತೇವಾಂಶವಿರುವ ಒಣ ಭೂಮಿಯೇ ಈ ಬೆಳೆಗೆ ಸೂಕ್ತ. ಈ ನಿಟ್ಟಿನಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ.

ಆರೋಗ್ಯಕ್ಕೆ ಉತ್ತಮ:ಡ್ರ್ಯಾಗನ್‌ ಫ್ರೂಟ್ಸ್‌ ಉಷ್ಣವಲಯದ ಹಣ್ಣು. ಕೆಂಪಗಿದ್ದು ವಿಶಿಷ್ಟವಾದ ಹಣ್ಣುಗಳಲ್ಲಿ ಒಂದು. ಈಗ ಎಲ್ಲೆಡೆ ಭಾರಿ ಬೇಡಿಕೆ ಇದೆ. ಕೆಜಿಗೆ ಕನಿಷ್ಠ 150 ರೂ.ಗೆ ಮಾರಾಟವಾಗುತ್ತದೆ. ಕಡಿಮೆ ಕ್ಯಾಲೊರಿ ಇರುವ ಹಣ್ಣು ಇದಾಗಿದ್ದು, ಸುಮಾರು 6 ಕ್ಯಾಲೊರಿ ಹೊಂದಿರುತ್ತದೆ. ವಿಟಮಿನ್‌ ಸಿ, ವಿಟಮಿನ್‌ ಬಿ, ವಿಟಮಿನ್‌ ಡಿ, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ರಂಜಕದಂತಹ ಖನಿಜಗಳು ಹೇರಳವಾಗಿವೆ.

ಡ್ರ್ಯಾಗನ್ ಫ್ರೂಟ್ ಜೊತೆಗೆ ಸೇಬು ಬೆಳೆ:ಡ್ರ್ಯಾಗನ್ ಫ್ರೂಟ್ ಜೊತೆಗೆ ಸೇಬು ಬೆಳೆಯುವ ಕಡೆಗೂ ಸೋಮಶೇಖರ್ ಮನಸ್ಸು ಮಾಡಿದ್ದಾರೆ. ಪ್ರಾಯೋಗಿಕವಾಗಿ ಈ ಜಮೀನಲ್ಲಿ ಸೇಬು ಬೆಳೆಯಬಹುದಾ ಎಂದು ಪರೀಕ್ಷೆ ಮಾಡಲು 10 ಗಿಡಗಳನ್ನು ಹಿಮಾಚಲ ಪ್ರದೇಶದಿಂದ ತರಿಸಿ ಕಳೆದೆರಡು ವರ್ಷಗಳ ಹಿಂದೆ ನೆಟ್ಟು ಪೋಷಿಸುತ್ತಿದ್ದಾರೆ. ಈ ಗಿಡಗಳು ಉತ್ತಮವಾಗಿ ಬಂದಿದ್ದು ಹಣ್ಣು ಬಿಟ್ಟಿವೆ. ಬಾಳೆ ಗಿಡಗಳನ್ನೂ ನೆಟ್ಟಿದ್ದಾರೆ.

ಬಾಳೆ ಗಿಡಗಳು (ETV Bharat)

''ನಾವು ಮೊದಲು ಭತ್ತ, ರಾಗಿ, ಜೋಳ ಬೆಳೆಯುತ್ತಿದ್ದೆವು. ಇದರಿ‌ಂದ ನಿರೀಕ್ಷಿಸಿದ ಆದಾಯ ಸಿಗದೆ ಖರ್ಚೇ ಹೆಚ್ಚಾಗುತಿತ್ತು. ಈ ನಿಟ್ಟಿನಲ್ಲಿ ಯೋಗ್ಯ ಬೇಸಾಯ ಯಾವುದೆಂದು ಯೋಚಿಸಿದಾಗ ಡ್ರ್ಯಾಗನ್ ಫ್ರೂಟ್ ಬೆಳೆಯುವ ಯೋಚನೆ ಬಂತು. ವೈಜ್ಞಾನಿಕವಾಗಿ ಕೃಷಿ ಮಾಡಿದ್ದು ಇಳುವರಿಯೂ ಬರುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ನಾವು ನಿರೀಕ್ಷಿಸಿದ ಬೆಲೆ ಸಿಗುತ್ತಿಲ್ಲ. ಇದೇ ಜಮೀನಿನಲ್ಲಿ ಪ್ರಾಯೋಗಿಕವಾಗಿ ಸೇಬು ಗಿಡಗಳನ್ನು ತಂದು ನೆಟ್ಟಿದ್ದೇನೆ. ಚೆನ್ನಾಗಿ ಗಿಡ ಬೆಳೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗಿಡಗಳನ್ನು ತಂದು ನೆಡುವೆ.''-ಸೋಮಶೇಖರ್ - ರೈತ.

ಪ್ರಾಯೋಗಿಕವಾಗಿ ಬೆಳೆಯಲಾದ ಸೇಬು ಹಣ್ಣಿನ ಗಿಡಗಳು (ETV Bharat)
Last Updated : Jul 1, 2024, 8:34 AM IST

ABOUT THE AUTHOR

...view details