ಬೆಂಗಳೂರು :ರಾಷ್ಟ್ರಧ್ವಜಕ್ಕೆ ಅವಮಾನ ಮಾಡಬೇಡಿ. ಒಂದು ವೇಳೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪೀಕರ್ ಯು.ಟಿ. ಖಾದರ್ ಸದನದಲ್ಲಿ ಎಚ್ಚರಿಕೆ ನೀಡಿದರು. ಇಂದು ಬೆಳಗ್ಗೆ ಸದನ ಆರಂಭಗೊಂಡಾಗ, ಸೋಮವಾರ ಸಕಾಲಕ್ಕೆ ಆಗಮಿಸಿದ್ದ ಶಾಸಕರ ಹೆಸರುಗಳನ್ನು ಪ್ರಕಟಿಸಿದ ನಂತರ ಸಭಾಧ್ಯಕ್ಷರು ಅಧಿಕಾರಿಗಳಿಂದ ನನಗೆ ಮಾಹಿತಿ ಬಂದಿದೆ. ರಾಷ್ಟ್ರಧ್ವಜವನ್ನು ಸದನದೊಳಗೆ ತಂದಿದ್ದಾರೆ ಎಂಬ ಮಾಹಿತಿ ಇದೆ. ನನ್ನ ಜವಾಬ್ದಾರಿ, ಕರ್ತವ್ಯವನ್ನು ನಿಭಾಯಿಸಬೇಕು. ಯಾರೂ ಕೂಡ ಅವಮಾನ ಮಾಡಬಾರದು. ಸದನದ ಹೊರಗೆ ನಡೆದಿರುವ ಘಟನೆ ಬಗ್ಗೆ ಚರ್ಚೆ ಮಾಡಲು ಅಡ್ಡಿಯಿಲ್ಲ. ಅದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಆಗ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿಯ ಎಲ್ಲಾ ಶಾಸಕರು ಆಕ್ರೋಶ ವ್ಯಕ್ತಪಡಿಸಿ, ಅಗೌರವ ನಾವು ಮಾಡಿಲ್ಲ. ಒಂದು ವೇಳೆ ನಾವು ಮಾಡಿದ್ದರೆ ಕಾನೂನು ಕ್ರಮ ಜರುಗಿಸಿ. ಭಾರತದ ಧ್ವಜವನ್ನು ಹಿಡಿದು ಬರುವುದು ತಪ್ಪೇ?, ಯಾರು ನಿಮಗೆ ಬಾವುಟವನ್ನು ತಂದಿದ್ದಾರೆ ಎಂದು ಹೇಳಿದರು ಅಂತಾ ಪ್ರಶ್ನಿಸಿದರಲ್ಲದೆ, ಭಾರತದ ಧ್ವಜವನ್ನು ಹಿಡಿಯಲು ನಮಗೆ ಹೆಮ್ಮೆ ಎನಿಸುತ್ತದೆ ಎಂದರು.