ಬೆಳಗಾವಿ: ಬೆಳಗಾವಿಯ ಸದಾಶಿವ ನಗರದಲ್ಲಿ ಇತ್ತೀಚೆಗೆ ಡಾ. ಪ್ರದೀಪ ಗೌಡರ ಎಂಬ ವೈದ್ಯರ ಮೇಲೆ ಕಾಂಗ್ರೆಸ್ ಮುಖಂಡ ಆರೀಫ್ ದೇಸಾಯಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ನಗರ ಪೊಲೀಸ್ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಡಾ. ಪ್ರದೀಪ ಗೌಡರ ಅವರ ಮನೆಯ ಮುಂದೆ ಕಾರ್ ಪಾರ್ಕಿಂಗ್ ಮಾಡುವ ವೇಳೆ ಕಾಂಗ್ರೆಸ್ ಮುಖಂಡ ಆರೀಫ್, ಅವರ ಮನೆಯ ಕುಟುಂಬಸ್ಥರ ಮುಂದೆಯೇ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಗೂಂಡಾವರ್ತನೆ ಪ್ರದರ್ಶಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೂ ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ. ವೈದ್ಯರ ಮೇಲೆ ಈ ರೀತಿ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪದೇ ಪದೇ ಇಂಥ ಘಟನೆಗಳು ಮರುಕಳಿಸುತ್ತವೆ. ಆದ್ದರಿಂದ ಹಲ್ಲೆ ಮಾಡಿದ ಆರೀಫ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಮಾಜದಲ್ಲಿ ಜನರ ಆರೋಗ್ಯ ಕಾಪಾಡುವ ವೈದ್ಯರ ಮೇಲೆ ಈ ರೀತಿ ಹಲ್ಲೆ ಖಂಡನೀಯ. ಘಟನೆಯಿಂದ ಎಲ್ಲ ವೈದ್ಯರು ಭೀತಿಗೊಂಡಿದ್ದಾರೆ. ಬೆಳಗಾವಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ವೈದ್ಯ ವಿದ್ಯಾರ್ಥಿಗಳಿದ್ದಾರೆ. ಹಾಗಾಗಿ, ಆರೋಪಿ ಆರೀಫ್ ವಿರುದ್ಧ ಕಠಿಣ ಕ್ರಮ ಕೈಗೊಂಡು ವೈದ್ಯರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಡಿಸಿಪಿ ಪಿ.ವ್ಹಿ. ಸ್ನೇಹಾ ಅವರಿಗೆ ಮನವಿ ಸಲ್ಲಿಸಿದರು.