ಬೆಳಗಾವಿ:ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಇದು ತರಕಾರಿ ಮಾರುಕಟ್ಟೆ ಸಂತೆಯಲ್ಲ. ಈ ವಿಚಾರವಾಗಿ ಮಾತನಾಡುವವರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುವಂತೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಒತ್ತಾಯಿಸಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ದೆಹಲಿಗೆ ಹೋಗಿದ್ದಾರೆ. ಬೆಳಗ್ಗೆ ನಾನೇ ಅವರ ಜೊತೆಗೆ ಮಾತನಾಡಿದ್ದೇನೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಹಾಗೂ ಡಿಸಿಎಂ ಚರ್ಚೆಯ ಬಗ್ಗೆ ಮಾತನಾಡಲು ಅದು ತರಕಾರಿ ಮಾರುಕಟ್ಟೆಯಲ್ಲ. ಹಾದಿ ಬೀದಿಯಲ್ಲಿ ಮಾತನಾಡುವವರ ವಿರುದ್ಧ ಹೈಕಮಾಂಡ್ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದರು.
ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಪಕ್ಷವೇ ಆಯ್ಕೆ ಮಾಡಿದೆ. ಕೇವಲ ಪ್ರಚಾರಕ್ಕಾಗಿ ಈ ರೀತಿ ಚರ್ಚೆ ಮಾಡುವುದು ಸರಿಯಾದ ಕ್ರಮವಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಯುವ ಘಟಕದ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ಯಾವುದೇ ನಾಯಕರು ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು. ಮಾಧ್ಯಮದವರ ಮುಂದೆ ವಿನಾಕಾರಣ ಹೇಳಿಕೆ ನೀಡುವುದು ಸರಿಯಲ್ಲ. ಯಾವುದೇ ಬಿನ್ನಾಭಿಪ್ರಾಯಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ಪರಿಹಾರ ಕೊಂಡುಕೊಳ್ಳಬೇಕೇ ಹೊರತು, ಹೀಗೆ ಅನಾವಶ್ಯಕವಾಗಿ, ಬಹಿರಂಗವಾಗಿ ಮಾತನಾಡಿ ಜನರಲ್ಲಿ ಗೊಂದಲ ಸೃಷ್ಟಿಸಬಾರದು. ಇಂತಹ ಚರ್ಚೆಗಳಿಂದ ಪಕ್ಷದ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ದೇಶಪಾಂಡೆ ಎಚ್ಚರಿಸಿದರು.
ಬೆಂಗಳೂರಿನಲ್ಲಿರುವ ಕೆಲವು ಕಚೇರಿಗಳು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರವಾಗಬೇಕು. ಇಲ್ಲಿಯೇ ಹೆಚ್ಚಿನ ಸಭೆಗಳು ನಡೆಯುವಂತಾದರೆ, ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದ ದೇಶಪಾಂಡೆ, ಜನರು ಹಾಗೂ ಜನಪ್ರತಿನಿಧಿಗಳ ಪ್ರೀತಿ ಅವರ ಮೇಲಿದೆ. ಅವರ ಪ್ರೀತಿ ಜಿಲ್ಲೆಯ ಮೇಲಿದೆ ಹೀಗಾಗಿ ಅದೇ ಸ್ಥಳಕ್ಕೆ ವಾಪಸ್ ಆಗುತ್ತಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಸಿದ್ದರಾಮಯ್ಯನವರ ಕೈ ಕಟ್ಟಿ ಹಾಕುವ ಕೆಲಸ ನಡೆಯುತ್ತಿದೆ: ಜಗದೀಶ್ ಶೆಟ್ಟರ್ - Jagadish Shettar