ಉಡುಪಿ:ದೀಪಾವಳಿ ಎಂದರೆ ಹೆಸರೇ ಹೇಳುವಂತೆ ಬೆಳಕಿನ ಹಬ್ಬ, ದೀಪಗಳ ಹಬ್ಬ. ಉಳಿದೆಲ್ಲಾ ಹಬ್ಬಗಳ ಆಚರಣೆಗಳು ಒಂದೆರಡು ದಿನಗಳ ಮಟ್ಟಿಗೆ ಸೀಮಿತವಾಗಿದ್ದರೆ, ದೀಪಾವಳಿ ಹಬ್ಬ ಐದು ದಿನಗಳು ನಡೆಯುವ ಸಂಭ್ರಮದ ಹಬ್ಬ. ಅದರಂತೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಜಲಪೂರಣ ಹಾಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು.
ಜಲಪೂರಣ ಶಾಸ್ತ್ರದ ಅಂಗವಾಗಿ ಮಠದ ಪುರೋಹಿತ ರಾಘವೇಂದ್ರ ಕೊಂಡಂಚ ಕಲಶಪೂಜೆ ಮಾಡಿದರು. ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಜಲಪೂರಣ ಮಾಡಲಾಯಿತು. ಮರುದಿನ ಬ್ರಾಹ್ಮೀ ಮುಹೂರ್ತದಲ್ಲಿ ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪುತ್ತಿಗೆ ಉಭಯ ಶ್ರೀಪಾದರು ಗಂಧೋಪಚಾರದೊಂದಿಗೆ ಎಣ್ಣೆ ಶಾಸ್ತ್ರವನ್ನು ಮಾಡಿದರು. ನೆರೆದಿದ್ದ ಭಕ್ತರಿಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು.