ಬೆಂಗಳೂರು:ನ್ಯಾಯಾಂಗ ವ್ಯವಸ್ಥೆಯ ಎಲ್ಲ ದಾಖಲೆಗಳ ಡಿಜಿಟಲೀಕರಣ ಮತ್ತು ಇ-ಫೈಲಿಂಗ್‌ಗೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ತಿಳಿಸಿದ್ದಾರೆ.
78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹೈಕೋರ್ಟ್‌ನಲ್ಲಿಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಇಡೀ ಸಮಾಜ ಪ್ರಸ್ತುತ ಅಂತರ್ಜಾಲದ ಪರ್ಯಾಯ ಮಾರ್ಗದಲ್ಲಿ ನಿಂತಿದ್ದು, ನ್ಯಾಯಾಂಗ ವ್ಯವಸ್ಥೆಯೂ ಅದರಿಂದ ಪ್ರತ್ಯೇಕವಾಗದು. ತಂತ್ರಜ್ಞಾನದ ಪ್ರಗತಿಯನ್ನು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಅಳವಡಿಸುವುದು ಅತ್ಯವಶ್ಯಕ. ಅಲ್ಲದೆ, ತಂತ್ರಜ್ಞಾನವನ್ನು ನ್ಯಾಯಯುತವಾಗಿ ಬಳಸಿದಲ್ಲಿ ತ್ವರಿತ ಮತ್ತು ಪಾರದರ್ಶಕ ನ್ಯಾಯ ವಿತರಣಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದರು.
ಇ-ಮೂಲ ಸೌಕರ್ಯ, ನಾಗರಿಕ ಕೇಂದ್ರಿತ ಇ-ಸೇವೆಗಳು ಮತ್ತು ಇ-ಸೇವಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆನ್ಲೈನ್ ಡಿಜಿಟಲ್ ಕೇಸ್ ಡೈರಿ ಎಂಬುದು ವಕೀಲರು, ಕಕ್ಷಿದಾರರು ಮತ್ತು ಸರ್ಕಾರಿ ಇಲಾಖೆಗಳಿಗೆ ರಾಜ್ಯಾದ್ಯಂತ ತಮ್ಮ ಪ್ರಕರಣಗಳ ವಿವರವನ್ನು ಡ್ಯಾಶ್‌ಬೋರ್ಡ್ ಮೂಲಕ ಒದಗಿಸಲು ಅಂತರ್ಜಾಲ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಜೆ ತಿಳಿಸಿದರು.
ರಾಷ್ಟ್ರ ನಿರ್ಮಾಣಕ್ಕಾಗಿ ನಮ್ಮ ಬದ್ಧತೆಯನ್ನು ನವೀಕರಿಸುವ, ಭವಿಷ್ಯದ ಪ್ರಗತಿಗೆ ಅಗತ್ಯವಿರುವ ಜವಾಬ್ದಾರಿಗಳ ಬಗ್ಗೆ ನಾವು ನೆನಪಿಸಿಕೊಳ್ಳಬೆಕಾದ ಸಮಯ ಮತ್ತೆ ಬಂದಿದೆ. ಪ್ರಜಾಪ್ರಭುತ್ವ ಆಡಳಿತವಿರುವ ಭಾರತದಂತಹ ದೇಶದಲ್ಲಿ ನ್ಯಾಯಾಂಗ ಸಂಸ್ಥೆಯ ಅತ್ಯಂತ ನಿರ್ಣಯಕ ಪಾತ್ರ ವಹಿಸಲಿದೆ. ಕಾನೂನಿನ ಆಡಳಿತದ ದಾರಿದೀಪದ ಜವಾಬ್ದಾರಿಯಿಂದ ಎಲ್ಲರಿಗೂ ನ್ಯಾಯದ ಗುರಿ ಸಾಧಿಸಲು ಮತ್ತು ಸಮಾನತೆ ಒಳ್ಳಗೊಳ್ಳುವಿಕೆ, ಸುಸ್ಥಿರ ಪ್ರಜಾಪ್ರಭುತ್ವ ಮೌಲ್ಯಗಳಿಗೆ ದಾರಿದೀಪವಾಗಬೇಕಾಗಿದೆ ಎಂದು ಹೇಳಿದರು.