ಕರ್ನಾಟಕ

karnataka

ETV Bharat / state

ವೀರಶೈವ ಧರ್ಮದ ಮೂಲ ಸಿದ್ಧಾಂತ ಅರಿತರೆ ಧರ್ಮದಲ್ಲಿ ಸವಾಲುಗಳನ್ನು ಎದುರಿಸಬಹುದು: ರಂಭಾಪುರಿ ಶ್ರೀ - ISHTA LINGA POOJA IN TUMAKURU

ತುಮಕೂರಿನಲ್ಲಿ ನಡೆದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಭಾಗವಹಿಸಿದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ISHTA LINGA POOJA IN TUMAKURU
ರಂಭಾಪುರಿ ಶ್ರೀಗಳ ಆಶೀರ್ವಚನ (ETV Bharat)

By ETV Bharat Karnataka Team

Published : Dec 30, 2024, 7:15 AM IST

ತುಮಕೂರು: ಜಗದ್ಗುರು ಶ್ರೀ ರೇಣುಕಾಚಾರ್ಯರು ನಡೆಸಿಕೊಂಡು ಬಂದ ವೀರಶೈವ ಪರಂಪರೆಯಲ್ಲಿ ವೀರಶೈವ ಧರ್ಮದ ಮೂಲ ಸಿದ್ಧಾಂತವನ್ನು ಬಹಳಷ್ಟು ಜನ ತಿಳಿದುಕೊಂಡಿಲ್ಲ. ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನವೂ ಮಾಡುತ್ತಿಲ್ಲ. ಹೀಗಾಗಿ ಧರ್ಮದಲ್ಲಿ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಕಾಣುವಂತಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತುಮಕೂರು ನಗರದಲ್ಲಿ ನಾಲ್ಕು ದಿನಗಳ ಕಾಲ ನಡೆದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇರುವಂತಹ ಸತ್ಯವನ್ನು ಗ್ರಂಥಗಳಿಂದ ತಿಳಿದುಕೊಳ್ಳಲು ಸಾಧ್ಯವಿದೆ. ಆದರೆ ಕೆಲವರು ಅದನ್ನು ತಿಳಿದುಕೊಳ್ಳದಿರುವುದರಿಂದ ಕೆಲವೊಂದು ಅವಾಂತರಗಳು ಮತ್ತು ಆತಂಕಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು.

ರಂಭಾಪುರಿ ಶ್ರೀಗಳ ಆಶೀರ್ವಚನ (ETV Bharat)

ವೀರಶೈವ ಧರ್ಮದ ಇತಿಹಾಸ ಮತ್ತು ಬೆಳೆದು ಬಂದ ಪರಂಪರೆ ಅತ್ಯಂತ ಪ್ರಾಚೀನ ಎನ್ನುವುದರಲ್ಲಿ ಎರಡು ಮಾತಿಲ್ಲ. ಪರಮಾಚಾರ್ಯರು ಹಾಕಿದ ಧರ್ಮ ಸಿದ್ಧಾಂತದ ತಳಹದಿಯ ಮೇಲೆ 12ನೇ ಶತಮಾನದ ಬಸವಾದಿ ಶರಣರು ಅದರಂತೆ ನಡೆದು ನುಡಿದು ಸಮಾಜದ ಶಕ್ತಿಯನ್ನು ಮತ್ತಷ್ಟು ಸಂವರ್ಧನೆಗೊಳಿಸಿರುವಂತಹುದನ್ನು ಜನ ತಿಳಿದುಕೊಳ್ಳಬೇಕು. ಬಸವಾದಿ ಶಿವಶರಣರಿಗಿಂತ ಪೂರ್ವದಲ್ಲಿಯೇ ವೀರಶೈವ ಧರ್ಮ ಅಸ್ತಿತ್ವದಲ್ಲಿತ್ತು. ಜಗದ್ಗುರು ಪಂಚಾಚಾರ್ಯರ ಪರಂಪರೆ, ಪವಿತ್ರವಾದ ಗುರು ಪರಂಪರೆ, ಈ ವೀರಶೈವ ಧರ್ಮ ಪರಂಪರೆ ಮತ್ತು ತತ್ವ ಸಿದ್ದಾಂತಗಳನ್ನು ಪ್ರತಿಷ್ಠಾಪಿಸಿ ಜನರನ್ನು ಸನ್ಮಾರ್ಗದ ಕಡೆಗೆ ಕರೆತಂದಿತು ಎಂಬುದಕ್ಕೆ ಇತಿಹಾಸದಲ್ಲಿನ ಅನೇಕ ಸಂಗತಿಗಳು ಇವೆ ಎಂದರು.

ಸಾನಿಧ್ಯ ವಹಿಸಿದ್ದ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಾನು ಅಭಿವೃದ್ಧಿ ಹೊಂದಬೇಕು ಎಂದು ಅತಿಯಾದ ಆಸೆಯೊಂದಿಗೆ ಮನುಷ್ಯ ಕೆಲ ವಾಮ ಮಾರ್ಗಗಳನ್ನು ಹಿಡಿಯುತ್ತಾನೆ. ಈ ವೇಳೆ, ಆತನ ಮನಸ್ಸಿನಲ್ಲಿ ಕಲ್ಮಷ ಸೃಷ್ಟಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಧರ್ಮ ಮಾರ್ಗದಲ್ಲಿ ಸಾಗಿದರೆ ಅಂತಹ ಕಲ್ಮಷಗಳನ್ನು ತೊಡೆದು ಹಾಕಬಹುದಾಗಿದೆ. ಆಗ ಮನಸ್ಸು ಶುದ್ದವಾಗಿರುತ್ತದೆ. ಹೀಗಾಗಿ ಇಂತಹ ಧನುರ್ಮಾಸ ಇಷ್ಟಲಿಂಗ ಮಹಾಪೂಜೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದರು.

ಅತಿಥಿಗಳಾಗಿ ಭಾವಹಿಸಿದ್ದ ವೀರಶೈವ ಮಹಾಸಭಾ ಅಧ್ಯಕ್ಷ ಶಂಕರ್ ಬಿದರಿ ಮಾತನಾಡಿ, ಮಠಗಳ ಕಾರ್ಯ ಕೇವಲ ಆಸ್ತಿ ಮಾಡುವ ಮೂಲಕವಲ್ಲ ಬದಲಾಗಿ ಧಾರ್ಮಿಕ ಮೌಲ್ಯವನ್ನು ಪ್ರಚಾರ ಮಾಡಬೇಕಿದೆ. ಅದನ್ನು ರಂಭಾಪುರಿ ಪೀಠದ ಸ್ವಾಮೀಜಿ ನಡೆಸಿಕೊಂಡು ಬರುತ್ತಿದ್ದಾರೆ. ವೀರಶೈವ ಮತ್ತು ಲಿಂಗಾಯತ ಒಂದೇ ಎಂಬುದು ಸಮುದಾಯದವರು ತಿಳಿಯಬೇಕಿದೆ. ಸಮಾಜಕ್ಕೆ ಬಲ ತುಂಬಬೇಕಾದ ಕೆಲಸ ಮಾಡಬೇಕಿದೆ ಎಂದರು.

ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಮೂರು ದಿನ ಕುಂಭಮೇಳ ; ಸುತ್ತೂರು ಸ್ವಾಮೀಜಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ - KUMBHA MELA

ABOUT THE AUTHOR

...view details