ಹುಬ್ಬಳ್ಳಿ :ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಲವು ಧಾರ್ಮಿಕ ಕೇಂದ್ರಗಳಿವೆ. ಪ್ರಸಿದ್ಧ ಸಿದ್ಧಾರೂಢ ಮಠ, ಮೂರುಸಾವಿರ ಮಠ, ಶಿರೂರು ಪಾರ್ಕ್‌ನ ತದ್ರೂಪಿ ಅಯ್ಯಪ್ಪಸ್ವಾಮಿ ಮಂದಿರ, ಜೈನ ಮಂದಿರಗಳು, ವರೂರಿನ ನವಗ್ರಹ ತೀರ್ಥ, ಐತಿಹಾಸಿಕ ಉಣಕಲ್ ಚಂದ್ರಮೌಳೇಶ್ವರ ದೇವಸ್ಥಾನ ಇವೆ. ಈ ಐತಿಹಾಸಿಕ ಹಾಗೂ ನವ್ಯ ಹಲವು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಇದೀಗ ಮತ್ತೊಂದು ಭವ್ಯ ಮಂದಿರ ಸೇರ್ಪಡೆಯಾಗಿದ್ದು, ಭಕ್ತರನ್ನು ಸೆಳೆಯುತ್ತಿದೆ.
ಒಂದೇ ಕಡೆ ಹಲವು ದೇಗುಲ ; ತಾಲೂಕಿನ ಪಾಲಿಕೊಪ್ಪ ಬಳಿ ಪುಣೆ-ಬೆಂಗಳೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ 'ಶಿವಶಕ್ತಿಧಾಮ'ವು ಭಕ್ತಗಣವನ್ನು ಕೈಬೀಸಿ ಕರೆಯುತ್ತಿದೆ. ಆಕರ್ಷಕ ದೇಗುಲ, ವಿಶಾಲ ದೇವಸ್ಥಾನದ ಆವರಣ ಕಣ್ಮನ ಸೆಳೆಯುತ್ತಿದೆ. ಶಿವನ ಭವ್ಯ ಮಂದಿರ ಇದೀಗ ಪ್ರಥಮ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ಈ ದೇವಾಲಯ ಹಲವು ವಿಶೇಷತೆಗಳಿಂದ ಕೂಡಿದೆ. ಸಂಪೂರ್ಣ ಶಿಲೆಯಲ್ಲಿ ನಿರ್ಮಿಸಲಾದ ಈ ದೇವಸ್ಥಾನವು ವಿಶೇಷತೆ ಕೂಡಿದೆ. ವಿಶಾಲವಾದ ದೇವಸ್ಥಾನದ ಆವರಣದಲ್ಲಿ ಶ್ರೀ ಆನಂದೇಶ್ವರ (ಶಿವ), ಶ್ರೀ ವಿಜಯಗಣಪತಿ (ಗಣೇಶ) ಹಾಗೂ ಜ್ಞಾನಾಂಬಿಕೆ (ಪಾರ್ವತಿ) ಹೀಗೆ ವಿವಿಧ ದೇಗುಲಗಳು ಇಲ್ಲಿವೆ.
ಒಂದೇ ಜಾಗದಲ್ಲಿ ಹಲವು ದೇವರನ್ನು ಕಾಣುವ ಮೂಲಕ ಭಕ್ತಿ ಸಮರ್ಪಿಸಿ ಕೃತಾರ್ಥರಾಗುವ ಅವಕಾಶ ಇಲ್ಲಿ ಸಿಗಲಿದೆ. ಇಲ್ಲಿ ನಿರ್ಮಾಣವಾದ ಪ್ರತಿಯೊಂದು ದೇವಸ್ಥಾನಗಳು ವಿಶಿಷ್ಟ ಹಾಗೂ ಪರಂಪರೆಯನ್ನು ಸಾರುವಂತಿವೆ. ಶಿವ ದೇವಸ್ಥಾನವನ್ನು ಆಗಮ ಶಿಲ್ಪ ಶಾಸ್ತ್ರದ ಪ್ರಕಾರ ಸಂರಚನೆ ಮಾಡಿ ನಿರ್ಮಿಸಲಾಗಿದೆ. ವಾಸ್ತುವಿನ ಪ್ರಕಾರ ಹಾಗೂ ಯಾವ ಸ್ಥಾನ ಯಾವ ದೇವರಿಗೆ ಶ್ರೇಷ್ಠ ಎಂಬುದನ್ನು ಪರಿಶೀಲಿಸಿ ಪ್ರತಿಷ್ಠಾಪನೆ ಮಾಡಲಾಗಿದೆ. ಮುಖ್ಯವಾಗಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ತಳಭಾಗದಲ್ಲಿ ಶಿವಲಿಂಗವು ಚೌಕಾಕಾರದಲ್ಲಿ ನಿರ್ಮಿಸಲಾಗಿದೆ. ಏಕಶಿಲೆಯ ಮೂರ್ತಿ ಇದಾಗಿದೆ.
ಈ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ವೇಣುಗೋಪಾಲ ಭಟ್ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಿಂದ ಪಿ. ಬಿ ರಸ್ತೆ ಮೂಲಕ ಹಾವೇರಿಯತ್ತ ಹೋಗುವಾಗ ಹೊರವಲಯದ ಪಾಲಿಕೊಪ್ಪ ಬಳಿ ಬಲ ಬದಿಯಲ್ಲಿ ವಿಶಾಲ ಹಾಗೂ ಭವ್ಯ ಮಂದಿರವನ್ನು ಉದ್ಯಮಿ ವಿಜಯ ಸಂಕೇಶ್ವರ ಒಡೆತನದ ವಿಆರ್ಎಲ್ ಸಂಸ್ಥೆ ನಿರ್ಮಿಸಿ, ಶೃಂಗೇರಿ ಮಠಕ್ಕೆ ದಾನವಾಗಿ ನೀಡಿದೆ. ಆರು ಎಕರೆ ಜಮೀನಿನಲ್ಲಿ ಬೃಹತ್ ದೇವಾಲಯ ನಿರ್ಮಿಸಲಾಗಿದ್ದು, ಭಕ್ತರು ತನು-ಮನವನ್ನು ಸಂತೈಸುವ ತಾಣವಾಗಿದೆ ಎಂದರು.